ಗುರುವಾರ, ಅಕ್ಟೋಬರ್ 29, 2015

#ಮತ್ತೊಂದು_ತಪ್ಪಿಸಿಕೊಂಡ_ಮೊಬೈಲ್_ಕಥೆ

ಇದರ ಹಿಂದೆಯೂ ಒಬ್ಬರ ಜಂಗಮವಾಣಿಸಿಕ್ಕಿತ್ತು(Mobile) ಅದರ ಬಗ್ಗೆಯೂ ಬರೆದಿದ್ದೆ,
ಇದು ನಂತರ ನಡೆದ ಘಟನೆ,
ಎರಡಕ್ಕೂ ಬಹಳ ವ್ಯತ್ಯಾಸವಿದೆ:-
ನಾನು ಕೆಲಸ ಮುಗಿಸಿ ಕೊಂಡು ಮೋಟಾರು(ಬಸ್)ವಾಹನ ಇಳಿದು ಮನೆಯ ಕಡೆ ಹೆಜ್ಜೆ ಹಾಕುತ್ತಾ ಇದ್ದೆ,ಇನ್ನೇನು ರಸ್ತೆಯನ್ನು ದಾಟಬೇಕು ಅನ್ನುವಷ್ಟರಲ್ಲಿ,ಇಬ್ಬರು ಚಿಗುರು ಮೀಸೆಯ ಹುಡುಗರು,ಯಾವುದೋ ಮರುವಿನ್ಯಾಸ ಮಾಡಿದ,ಹೋಂಡಾ ಡಿಯೋ ದ್ವಿಚಕ್ರವಾಹನದಲ್ಲಿ ಏಕ ಮುಖ ರಸ್ತೆಯಲ್ಲಿ ವೇಗವಾಗಿ ಬಂದರು,ಅಲ್ಲೇ ಹತ್ತಿರದ ತಂಗು ನಿಲ್ದಾನದಲ್ಲಿ ನಿಂತಿದ್ದ ಕೆಲವು ಯುವತಿಯರ ಹತ್ತಿರ ಹೋಗಿ ಏನೋ ಹೇಳಿ,ಅಲ್ಲಿಂದ ದ್ವಿಚಕ್ರ ವಾಹನವನ್ನು ತಿರುಗಿಸಿ ಕೊಂಡು ವೇಗವಾಗಿ ಕರ್ಕಶ ವಾಗಿ ಶಬ್ದಮಾಡುತ್ತಾ ಹೊರಟೇ ಬಿಟ್ಟರು,ತಿರುಗಿಸುವ ಭರದಲ್ಲಿ ಹಿಂಬದಿಯ ಸವಾರನ ಒಂದು ನೋಕಿಯಾ ಜಂಗಮವಾಣಿ(ಮೊಬೈಲ್) ಬಿದ್ದು ಹೋಯಿತು,ಅದನ್ನು ನೋಡಿದ ರಸ್ತೆ ದಾಟುತ್ತಿದ್ದವರು ಯಾರೂ ಗಮನಿಸಲಿಲ್ಲ,ಗಮನಿಸಿದವರು ನಮಗೆ ಅಗತ್ಯವಿಲ್ಲ್ ಅನ್ನೋ ಹಾಗೆ ನೋಡಿಯೂ ನೋಡದ ಹಾಗೇ ಹೊರಟು ಹೋದರು,
ನಾನು'ಹಲೋ...ಹಲೋ...'ಎಂದು ಕಿರುಚಿದರೂ ಆ ಯುವಕರಿಗೆ ಕೇಳಿಸಲಿಲ್ಲ,
"ಮೀಸೆ ಬಂದೋರಿಗೆ ದೇಶ ಕಾಣಲ್ವಂತಲ್ಲ..."ಹಾಗೇ...ಹೊರಟೇ ಹೋದರು..
ಆ ಪೊರ್ಕಿಗಳಂತೆ ಕಾಣುತ್ತಿದ್ದ ಯುವಕರು..
ಕೊನೆಗೆ ನಾನು ಆ ಜಂಗಮವಾಣಿಯ ಎಲ್ಲಾ ಅವಯವಗಳನ್ನು ಎತ್ತಿ ಕೊಂಡು ನನ್ನ ಕೈ ಚೀಲದಲ್ಲಿ ಹಾಕಿ ಕೊಂಡು ಮನೆಗೆ ಹೊರಟೆ.
ಮನೆಗೆ ಬಂದು ಅದನ್ನು ಎಲ್ಲಾ ಸೇರಿಸಿ ಜಂಗಮವಾಣಿಯನ್ನು ಚಾಲೂ ಮಾಡಿದೆ,ಆದರೆ ಅದಕ್ಕೆ ಆ ಚಾಲೂಕು "ಬಾಲ"ವಿರದ ಬಾಲಕ ಅದಕ್ಕೆ ಸುರಕ್ಷತಾ ಸಂಖ್ಯೆಯನ್ನು ಹಾಕಿದ್ದ,ಕೊನೆಗೆ ಅವನ ಜಂಗಮವಾಣಿಯಿಂದ ಆತನ ಸಿಮ್ ಬೇರ್ಪಡಿಸಿ ನನ್ನ ಒಂದು ಜಂಗಮವಾಣಿಗೆ ಹಾಕಿ,ಆತನ ಸಿಮ್ ನಲ್ಲಿ ಯಾರಾದರೂ ಪೋಷಕರ ಸಂಖ್ಯೆ ಸಿಗಬಹುದೆಂದು ಹುಡುಕುತ್ತಾ ಹೋದೆ,ಆತ ಎಲ್ಲೋ ಪಾರಿನ್ನಲ್ಲಿ ಹುಟ್ಟಿ ಬೆಳೆದವರಂತೆ ಮಾಮಾ ಅಂತ ಹಾಕಿ ಕೊಂಡಿದ್ದ,ನಾನು ಅವನ ಮಾವನ ಸಂಪರ್ಕ ಸಂಖ್ಯೆ ಇರಬಹುದು ಎಂದು ಕರೆ ಮಾಡಿದೆ ನೋಡಿದರೆ ಯಾರೋ ಹೆಂಗಸು ಕರೆ ಸ್ವೀಕರಿಸಿದರು,
ನಾನು ನಿಮ್ಮ ಹುಡುಗನ ಜಂ.ವಾ ನನ್ನ ಬಳಿ ಇದೆ ಅಂತ ಅವರಿಗೆ ನೆಡೆದ್ದನ್ನು ಹೇಳುವುದಕ್ಕೆ ಮೊದಲೇ..
ಆಕೆ ಏರು ಧ್ವನಿಯಲ್ಲಿ..
"ಏನು ನನ್ನ ಮಗನ ಜಂ.ವಾ ನಿನ್ನ  ಬಳಿ ಹೇಗೆ ಬಂತು,ನೀನು ಕದ್ದಿದ್ದೀಯ",ಅಂತ ಏಕವಚನದಲ್ಲಿ ಏನೇನೋ ಬಡಬಡಾಯಿಸಲು ಶುರುವಿಟ್ಟು ಕೊಂಡರು,
ನಾನು ಕೂಡಲೇ ಏರು ಧ್ವನಿಯಲ್ಲಿ ಉತ್ತರಿಸಿದೆ,
"ನಾನು ಜಂ.ವಾ ಕದ್ದಿದ್ದರೆ ನಿಮ್ಗ್ಯಾಕೆ ಕರೆ ಮಾಡುತ್ತಿದ್ದೆ,ಸಾಮಾನ್ಯ ಜ್ನಾನ ಇಟ್ಟು ಕೊಂಡು ಮಾತಾಡಿ ಮೊದಲು ಗೌರವ ಕೊಟ್ಟು,ಗೌರವ ತೆಗೆದು ಕೊಳ್ಳುವುದು ಅಭ್ಯಾಸ ಮಾಡಿ ಕೊಳ್ಳಿ,ಹೆಚ್ಚಿಗೆ ಮಾತಾಡಿದ್ರೆ ಇದನ್ನ ಇಲ್ಲೇ ಎಸೆಯುತ್ತೇನೆ,ನೀವು ಏನು ಮಾಡುತ್ತೀರೋ ಮಾಡಿ ಕೊಳ್ಳಿ "ಎಂದೆ,(ಆ ಜಂಗಮವಾಣಿಯನ್ನು ನೋಡಿದರೆ ಪೌಷ್ಟಿಕಾಂಶದ ಕೊರತೆಯುಳ್ಳ ವ್ಯಕ್ತಿಯಂತೆ ಸೊರಗಿ ಹೋಗಿತ್ತು,ಅದರಲ್ಲಿ ಅಂಕಿ,ಸಂಕಿ,ಕೀನಲ್ಲಿದ್ದ ಅಕ್ಷರಗಳು ಏನೂ ಕಾಣುತ್ತಿರಲಿಲ್ಲ ಅಷ್ಟರ ಮತ್ತಿಗೆ ಅದನ್ನು ಅದನ್ನು ಶೋಷಿಸಲಾಗಿತ್ತು ಬಿಡಿ)
ಆಕೆ ಕೂಡಲೆ
ಓ ಕ್ಷಮಿಸಿ ಸಾರ್,ಗೊತ್ತಾಗಲಿಲ್ಲ'ಅಂದರು.
ಕೊನೆಗೆ
"ನಿಮ್ಮ ಮಗನಿಗೆ ಇದನ್ನು ತೆಗೆದು ಕೊಂಡು ಹೋಗಲು ಹೇಳಿ,ಈಗ ಸಾಧ್ಯವಿಲ್ಲ ಬೆಳಿಗ್ಗೆ ಬರಲು ಹೇಳಿ ಅಂದೆ.."
ಅದಕ್ಕೆ ಆ ಪುಣ್ಯಾತ್ ಗಿತ್ತಿ ಏನು ಹೇಳಬೇಕು.
"ನೀವೇ ತಂದು ಕೊಟ್ಟು ಹೋಗಿ ಸಾರ್ ಮನೆ ಹತ್ರ ಬಂದು,ನಮ್ಮ ಮನೆ ಉತ್ತರಹಳ್ಳಿ ನಿಲ್ದಾನದ ಹತ್ತಿರ ವಿಳಾಸ ಹೇಳುತ್ತೇನೆ,"
ಎನ್ನಬೇಕೆ..!!!
ನನಗೆ ನಖಶಿಖಾ ಅಂತ ಸಿಟ್ಟು ನೆತ್ತಿಗೇರಿತು
"ಬೇಕಾದರೆ ಬಂದು ನಾಳೆ ತಗೊಂಡು ಹೋಗಿ,ಇಲ್ಲವಾದರೆ ಅದು ನನಗೆ ಎಲ್ಲಿ ಸಿಕ್ಕಿತ್ತೋ ಅಲ್ಲಿ ಈಗಲೇ ಎಸೆದು ಬರುತ್ತೇನೆ" ಅಂತ ತುಂಬಾ ಖಾರವಾಗಿ ಉತ್ತರಿಸಿದೆ.
ಅದಕ್ಕೆ ಆಕೆ ಅವನಿಗೆ ಹುಷಾರಿಲ್ಲ ಸಾರ್ ಅದಿಕ್ಕೆ ಅಂದ್ರು..
ನಾನು ಅಂದೆ
"ಅಲ್ಲಾರೀ ನಿಮ್ಮ ಮಗನಿಗೆ ಸಂಜೆ ಬಸ್ ನಿಲ್ದಾಣದ ಹತ್ತಿರ ವೇಗವಾಗಿ ಜಂಗಮವಾಣಿ ತನ್ನ ಜೇಬಿನಿಂದ ಬಿದ್ದಿದ್ದು ಅರಿವಿಲ್ಲದಂತೆ ದ್ವಿಚಕ್ರವಾಹನದಲ್ಲಿ ತಿರುಗಾಡುವಾಗ ಹುಷಾರಿರಲಿಲ್ಲವೇ!!!,ಅದಕ್ಕೆಲ್ಲ ಸಮಯವಿರುತ್ತೆ"!!!,ಅಂದೆ..
ಅದಕ್ಕೆ ಆಕೆ ಉತ್ತರಿಸಲು ತಡಬಡಾಯಿಸಿ,
ಕೊನೆಗೆ
"ಸರಿ ಸಾರ್..ಅವನಿಗೆ ನಾಳೆ ಬಂದು ತೆಗೆದು ಕೊಂಡು ಹೋಗಲು ಹೇಳುತ್ತೇನೆ"ಅಂದು,
ಧನ್ಯವಾದ ಹೇಳದೆ,
ಕರೆ ಸ್ಥಗಿತ ಗೊಳಿಸಿದರು..
ರಾತ್ರಿ ಆತನ ಜಂಗಮವಾಣಿಗೆ ಕೆಲವು ತಲೆ ಕೆಟ್ಟ ಯುವತಿಯರು,ಏನೇನೋ ಮೆಸೇಜ್ ಕಳುಹಿಸುತ್ತಿದ್ದರು,ಕೊನೆಗೆ ನಾನು ಜಂ ವಾ ಬಂದ್ ಮಾಡಿ ಮಲಗಿದೆ..
ಮರುದಿನ ಬೆಳಿಗ್ಗೆ ಆತನೇ ಯಾವುದೋ ಸಂಖ್ಯೆಯಿಂದ ಕರೆ ಮಾಡಿ ಬಂದ,
ಅವನ ಅವತಾರವೋ,ಅವನ ಕೇಶವಿನ್ಯಾಸವೋ ಅಬ್ಬಬ್ಬಾ ಅವನಿಗೇ ಪ್ರೀತಿ,ಕೊನೆಗೆ ನನ್ನಿಂದ ಜಂಗಮವಾಣಿ ಪಡೆದ,
"ನಾನು
ಏನು ಮಾಡುತ್ತಿದ್ದೀಯ ಅಂದೆ",
"ಅದಕ್ಕೆ ಆತ ಪಿ ಯು ಸಿ ೨ನೇ ವರ್ಷ ಅಂದ",
ನನಗೆ ಒಂದು ಕೃತಜ್ನತೆಯನ್ನೂ ಹೇಳದೆ ಅಂಡು ತಿರುಗಿಸಿ ಕೊಂಡು ನೀನ್ಯಾವ ಲೆಕ್ಕ ಅನ್ನೋ ಹಾಗೆ ಹೋಗೇ ಬಿಟ್ಟ..
ಪಿ ಯು ಸಿ ಎರಡನೇ ವರ್ಷಕ್ಕೆ ಹೀಗೆ,ಅಲ್ಲಿಗೆ ಸಾರ್ಥಕ ವಾಯಿತು ನಮ್ಮ ಸಮಾಜ ಹಾಗೂ ಪೋಷಕರ ಬದುಕು ಎಂದು ಮನಸ್ಸಲ್ಲೇ ಅಂದು ಕೊಂಡು,ಒಂದು ಸಣ್ಣ ಮುಗುಳುನಗೆ ಬೀರುತ್ತಾ ಮನೆ ಕಡೆ ಬಂದೆ.
ಇಂತವರೂ ಇದ್ದಾರೆ ನಮ್ಮ ಜಗತ್ತಲ್ಲಿ...
ಉಪಕಾರಕ್ಕೆ ಒಂದು ಧನ್ಯವಾದವನ್ನೂ ಹೇಳದೆ,ನೀನೇನು ನನಗೆ ಕೋಟಿ ಕೊಟ್ಟಿದ್ದೀಯ ನನ್ನ ಜಂಗಮವಾಣಿಯನ್ನು ನನಗೆ ಕೊಟ್ಟಿದ್ದೀಯ ಅದರ್ಲ್ಲೇನು ದೊಡ್ಡ ಸಾಧನೆ,ಅನ್ನೋ ಹಾಗೆ ಅಂದು ಕೊಂಡು ಹೋಗೋದು..
ಅದಕ್ಕೆ ದೊಡ್ಡೋರು ಹೇಳೋದು ಸುಳ್ಳಲ್ಲ ಅನ್ನೋದು..
"ಊರು ಪಾರುಪತ್ತಿಗೆ ಕಟ್ಟಿ ಕೊಂಡು,ನಮ್ಮ ಖಾಜಿ ಸಾಬ್ರು ಬಡವಾಗಿದ್ರಂತೆ"..