ಶನಿವಾರ, ಮಾರ್ಚ್ 20, 2021

Micheal fagan(Intruder)

𝐌𝐢𝐜𝐡𝐞𝐚𝐥 𝐅𝐚𝐠𝐚𝐧(Intruder)
(ಮೈಕೆಲ್ ಪಾಗೇನ್)

ಜಗತ್ತಿನ ಅತ್ಯಂತ ಭದ್ರತೆ ಹೊಂದಿರುವ ಜಾಗಗಳಲ್ಲಿ ಬ್ರಿಟಿಷ್ ರಾಯಲ್ ಪ್ಯಾಮಿಲಿಯ ಬಕಿಂಗ್ ಹ್ಯಾಮ್ ಅರಮನೆಯೂ ಒಂದು..

ಸುಮಾರು 39 ಎಕರೆ ಪ್ರದೇಶಕ್ಕೆ ಬಹಳ ಕಟ್ಟು ನಿಟ್ಟಿನ ಭದ್ರತೆ ಇದೆ,
77000 ಸ್ಕ್ವೇರ್ ಮೀಟರ್ ಫ್ಲೋರ್ ಏರಿಯಾ ಹೊಂದಿರುವ ಈ ಅರಮನೆ,
2020ರ ಒಂದು ವರದಿಯಲ್ಲಿನ ವ್ಯಾಲ್ಯೂಯೇಷನ್ ಪ್ರಕಾರ ಇದರ ಬೆಲೆ ಸುಮಾರು 4.9 ಬಿಲಿಯನ್ ಪೌಮ್ಡ್ ..!

ಇಂತಹಾ ಅತಿ ಸೂಕ್ಷ್ಮ,ಸುರಕ್ಷಿತ, ಹದ್ದಿನ ಕಣ್ಣಿರುವ,ಪ್ರದೇಶದ ಒಳಗೆ ಹೋಗಿ ಅದರಲ್ಲೂ ಬ್ರಿಟನ್ ರಾಣಿಯ ಮಲಗುವ ಕೋಣೆಗೆ ಒಬ್ಬ ಆಗಂತುಕ ನುಗ್ಗಿದ್ದ ಎಂದರೆ ನೀವು ನಂಬಲೇ ಬೇಕು.. 

ಇದು 20 ನೇ ಶತಮಾನದಲ್ಲಿ ನಡೆದ ಬ್ರಿಟಿಷ್ ರಾಯಲ್ ಪ್ಯಾಮಿಲಿಯ ಅತಿ ದೊಡ್ಡ ಭದ್ರತಾ ಲೋಪ ಎನ್ನಲಾಗಿದೆ..!

ಆ ಸಮಯದಲ್ಲಿ ಬ್ರಿಟನ್ ಪ್ರಧಾನಿಯಾಗಿ ಆಡಳಿತ ಮಾಡುತ್ತಾ ಇದ್ದವರು..
ಉಕ್ಕಿನ ಮಹಿಳೆ(𝐈𝐫𝐨𝐧 𝐋𝐚𝐝𝐲) ಎಂಬ ಖ್ಯಾತಿಯ ಕನ್ಸರ್ ವೇಟಿವ್ ಪಾರ್ಟಿಯ,

"ಮಾರ್ಗರೇಟ್ ಹಿಲ್ಡಾ ಥ್ಯಚರ್"..
(𝐌𝐚𝐫𝐠𝐞𝐫𝐞𝐭𝐞 𝐇𝐢𝐥𝐝𝐚 𝐓𝐡𝐚𝐭𝐜𝐡𝐞𝐫)

ಅರಮನೆಯ ಭದ್ರತೆಯನ್ನ ಭೇದಿಸಿ,ಕಣ್ಣು ತಪ್ಪಿಸಿ ಕದ್ದು ಒಳಬಂದ ಮನುಷ್ಯನ ಹೆಸರು ಮೈಕೆಲ್ ಪಾಗನ್,
ಇವರು ಹುಟ್ಟಿದ್ದು ಕ್ಲರ್ಕನ್ವೆಲ್,ಲಂಡನ್ ನಲ್ಲಿ 1948 ಇಸವಿಯಲ್ಲಿ,ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಬಾಲ್ಯ ಬಹಳ ಕಠಿಣವಾಗಿತ್ತು,
ತಂದೆ ಸ್ವಲ್ಪ ವಿಚಿತ್ರ ಸ್ವಭಾವದ ಮನುಷ್ಯ,ಇವರು ಬೆಳೆಯುತ್ತಾ ಇದ್ದ ಹಾಗೆ ತಂದೆಯ ಕೆಲವು ವರ್ತನೆ ನೋಡಲಾಗದೆ,ಮನೆ ಬಿಟ್ಟು ಹೊರಬಂದು,ಪೈಂಟಿಂಗ್ ಹಾಗೂ ಡೆಕೋರಿಟಿಂಗ್ ಕೆಲಸ ಮಾಡಲು ಪ್ರಾರಂಭ ಮಾಡಿಕೊಂಡು,1972 ಕ್ರಿಸ್ಟಿನ್ ಎಂಬುವರನ್ನ ಮದುವೆ ಕೂಡ ಆಗುತ್ತಾರೆ,ನಾಲ್ಕು ಜನ ಮಕ್ಕಳು ಜನಿಸುತ್ತಾರೆ..

ಅದಾದ ಸ್ವಲ್ಪ ಸಮಯಕ್ಕೆ ಗಂಡ ಹೆಂಡಿರ ಸಂಬಂಧದಲ್ಲಿ ಬಿರುಕು ಮೂಡಿ,ಕ್ರಿಸ್ಟಿನ್ ಇವರನ್ನ ಬಿಟ್ಟು,ಇನ್ನೊಬ್ಬ ಪ್ರಿಯಕರನ ಜೊತೆ ಜೀವನ ಮಾಡೋಕೆ ಪ್ರಾರಂಭ ಮಾಡುತ್ತಾರೆ..!

ಮೈಕೆಲ್ ಪಾಗನ್ ಒಬ್ಬಂಟಿಯಾಗುತ್ತಾರೆ...
ಆ ಸಮಯದಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿರುತ್ತೆ,ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುತ್ತೆ..
ಪಾಗನ್ ಕೂಡ ಕೆಲಸವಿಲ್ಲದೇ ಕಷ್ಟದಲ್ಲಿರುತ್ತಾರೆ,
ಆದರೆ ಬ್ರಿಟನ್ 
ಸರ್ಕಾರ ಕೆಲಸವಿಲ್ಲದವರಿಗೆ,ಸರ್ಕಾರದ ವತಿಯಿಂದ ಮೂಲಭೂತ ಭತ್ಯೆ ಕೊಡುತ್ತಿರುತ್ತದೇ..

ಆ ಸಮಯದಲ್ಲಿ ಥ್ಯಚರ್ ಪಕ್ಕದ ಪ್ಯಾಕಲ್ಯಾಮ್ಡ್ ಐಲ್ಯಾನ್ಡ್ ಮೇಲೆ ಯುದ್ಧ ಘೋಷಣೆ ಮಾಡಿರುತ್ತಾರೆ..
ದೇಶ ಇಷ್ಟು ಕಷ್ಟದಲ್ಲಿದ್ದು,ಇದರ ಬಗ್ಗೆ ಗಮನ ಹರಿಸೋದು ಬಿಟ್ಟು,
ಥ್ಯಚರ್ ಸರ್ಕಾರಕ್ಕೆ ಈ ಅನಾವಶ್ಯಕ,ಅಹಂ,ದೊಡ್ಡಸ್ತಿಕೆ ತೋರಿಸಿಕೊಳ್ಳೋಕೆ,ಶೋ ಆಪ್ ಗಾಗಿ ಯುದ್ಧ ಬೇಕಿರಲಿಲ್ಲ ಅನ್ನೋ ಪ್ರಶ್ನೆ ಕಾಡುತ್ತಾ ಇರುತ್ತೆ,ಇದರ ಬಗ್ಗೆ ಬೇಸರ,ತೀವ್ರ ಅಸಮಾಧಾನ,ಪಾಗೇನ್ ಗೆ ಇರುತ್ತೆ...

ಒಮ್ಮೆ ತಾನು ನಿರುದ್ಯೋಗ ಭತ್ಯೆ ತೆಗೆದು ಕೊಳ್ಳಲು ಸರ್ಕಾರದ ಕಚೇರಿಗೆ ಹೋದಾಗ ಅಲ್ಲಿರುವ ಅಧಿಕಾರಿಯ ಹತ್ರ..
"ನಾನು ಸರ್ಕಾರದ ಮುಖ್ಯಸ್ಥರ ಬಳಿ ನೇರವಾಗಿ ಮಾತಾಡಬೇಕು"ಅಂತ ಕೇಳಿದ್ದಾರೆ,ಪಾಗನ್..

ಅದಕ್ಕೆ ಅವರು 
"ನಿನ್ನ ಕ್ಷೇತ್ರದ ಎಂ.ಪಿ ಹತ್ರ ಹೋಗಿ ಮಾತಾಡು ಅವರು ಸರ್ಕಾರಕ್ಕೆ ನಿನ್ನ ಅಹವಾಲು ಮುಟ್ಟಿಸುತ್ತಾರೆ"ಎಂದು ವ್ಯ0ಗ್ಯವಾಗಿ ಹೇಳಿ,ನಗುತ್ತಾರೆ ಆ ಮಹಿಳಾ ಅಧಿಕಾರಿ..

ಮೈಕೆಲ್ ಪಾಗನ್ ಕೂಡಲೇ ತನ್ನ ಕ್ಷೇತ್ರದ ಎಂ.ಪಿ ಆಫೀಸ್ ಹುಡುಕಿ ಹೊರಟೇ ಬಿಡ್ತಾರೆ,ಆಫೀಸ್ ವಿಳಾಸ ಹುಡುಕಿ ಹೊರಗೆ ಕಾದಿದ್ದು,ಎಂ.ಪಿ ಬಂದ ಕೂಡಲೇ ಪರ್ಮಿಶನ್ ಕೇಳಿ ಒಳಗೆ ಹೋಗಿದ್ದಾರೆ..

(ಅಣ್ಣನ್ನ ನೋಡಬೇಕು ಅಂತ ಕೇಳೋದು..ನಾಳೆ ಬಾ..ಅಣ್ಣಾ ಬ್ಯುಜಿ,ಮೀಟಿಂಗ್ ನಲ್ಲಿದ್ದಾರೆ ಅಂತ ಅಣ್ಣ ನ ಚೇಲಾಗಳ ಹತ್ರ ಹೇಳಿಸಿ ಕೊಳ್ಳೋದು ಎಲ್ಲಾ ಇಲ್ಲಿ ಇರಲ್ಲ..ಸಮಸ್ಯೆ ನೇರವಾಗಿ ಅಪ್ರೋಚ್ಮಾಡುವ ಅಧಿಕಾರ ಪ್ರಜೆಗಳಿಗೆ ಇರುತ್ತೆ...
ಈಗಲೂ ಹಾಗೇ ಇದೆ..)

ಎಂ.ಪಿ ಕರೆದು ಕೂರಿಸಿ ಕೇಳಿದ್ರು..
ಹೇಳಿ,ಯಾರು ನೀವು,ಏನು ಸಮಸ್ಯೆ..
ಅದಕ್ಕೆ
ಪಾಗೇನ್ ನೋಡಿ 
"ಸಾರ್..ನಾನು ಪೈ0ಟರ್ ಮತ್ತೆ ಡೆಕೋರೆಟರ್ ನಂಗೇ ಕೆಲಸ ಇಲ್ಲ,
ದೇಶದ ಪ್ರಧಾನಿ ಇದರ ಬಗ್ಗೆ ಗಮನ ಹರಿಸೋದು ಬಿಟ್ಟು,ಯುದ್ಧ ಮಾಡೋಕೆ ಗಮನ ಕೊಡ್ತಾ ಇದ್ದಾರೆ,ದಯಮಾಡಿ ಇದನ್ನ ನೀವು ನನ್ನ ಪರವಾಗಿ ಹೇಳಿ.."
ಎಂದರು..
ಅದಕ್ಕೆ ಎಂ.ಪಿ
"ಅದೆಲ್ಲಾ ನಾನು ಹೇಳೋಕೆ ಸಾಧ್ಯವಿಲ್ಲ,
ಕಾರಣ ಮಾರ್ಗರೇಟ್ ಥ್ಯಚರ್ ನನ್ನ ಬಾಸ್,
ನನ್ನದೇ ಪಕ್ಷ ಕನ್ಸರ್ವೆಟಿವ್ ಪಾರ್ಟಿ ಲೀಡರ್,
ಯುದ್ಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ,
ಸರ್ಕಾರದ ಎಲ್ಲಾ ನಡೆಗೇ ನನ್ನ ಬೆಂಬಲ ಹಾಗೂ ಸಮರ್ಥನೆ ಇದೆ
ನೀನು ಒಂದು ಕೆಲಸ ಮಾಡ
ವಿರೋಧ ಪಕ್ಷದ ನಾಯಕರ ಹತ್ರ ಹೇಳು ಅವರು ಸದನದಲ್ಲಿ ನಿನ್ನ ಪರ ಪ್ರಶ್ನೆ ಮಾಡ್ತಾರೆ,
ಇಲ್ಲ ಅಂದ್ರೆ ರಾಯಲ್ ಹೈನೆಸ್(𝐐𝐮𝐞𝐞𝐧 𝐄𝐥𝐢𝐳𝐚𝐛𝐞𝐭𝐡-2) ಇದಾರಲ್ಲ ಅವರ ಅರಮನೆಗೆ ಹೋಗಿ ನೇರವಾಗಿ ಹೇಳು ಅವರೇ ಸುಪ್ರೀಂ ಇಡೀ ದೇಶಕ್ಕೆ,
ಅಂತ ಸಂಪೂರ್ಣ ವ್ಯ0ಗ್ಯ ಮಾಡಿ,
ನನಗೆ ಬಹಳ ಕೆಲಸವಿದೆ,ಕ್ಷಮಿಸಿ"ಅಂತ ಎದ್ದು ಹೊರಡುತ್ತಾರೆ..

ಆದ್ರೆ ಪಾಗನ್ ಅಷ್ಟು ಸುಲಭದ ಮನುಷ್ಯ ಅಲ್ಲ..
ಅವರು 

ನಾನು 
ಹರ್ ಮೇಜಿಸ್ಟಿ ಅಂದರೆ ಕ್ವೀನ್ ಎಲಿಜಬೆತ್-2 ನ ಮೀಟ್ ಆಗಿ ಕಷ್ಟ ಹೇಳಿ ಕೊಳ್ಳಲೇಬೇಕು ಎಂದು
ಅಲ್ಲೇ ನಿರ್ಧರಿಸಿಯೇ ಬಿಡ್ತಾರೆ..

ಆದರೆ ಬ್ರಿಟನ್ ಕ್ವೀನ್ ಮೀಟ್ ಅಗೋದರ ಕತೆ ಬಿಡಿ,ಗೇಟ್ ಹತ್ರ ಇರೋ ಗಾರ್ಡ್ ಹತ್ರ ಹೋಗೋಕೆ ಆಗಲ್ಲ ಬೇರೆಯವರಿಗೆ,
ಅಷ್ಟು ಭದ್ರತೆ ಇರುವ ಜಾಗ,ಬಕಿಂಗ್ ಹ್ಯಾಮ್ ಅರಮನೆ..
ಇನ್ನು ರಾಣಿ ಮಾತಾಡಿಸೋದು ಸಾಧ್ಯವಾ?

ಆದ್ರೆ ಪಾಗನ್ ಒಂದು ದಿನ ಬಸ್ ಹತ್ತಿ,ರಾಣಿ ಅರಮನೆ ಇರುವ ವೆಸ್ಟ್ ಮಿನಿಸ್ಟರ್ ಕಡೆ ಹೊರಟೆ ಬಿಟ್ಟರು..

ಎಲ್ಲಾ ಭದ್ರತೆ ಸಾಧನಗಳು ಹಾಗೂ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ,ಡ್ರೈನ್ ಪೈಪ್ ಹತ್ತಿ ಎತ್ತರದ ಗೋಡೆ ಹತ್ತಿ ರೂಪ್ ನಲ್ಲಿ ಓಡಾಡಿ ಅಲ್ಲಿಂದ ಇಳಿದು,ಲಾಕ್ ಮಾಡಿರದ ಕಿಟಕಿ ದಾಟಿ ಅರಮನೆಯ ಒಳ ನುಗ್ಗಿ,ರಾಯಲ್ ಚೇರ್ ಮೇಲೆ ಕೂತು,ಆಮೇಲೆ ಎಲ್ಲಾ ಕಡೆ ಓಡಾಡಿ,ಒಂದು ಕೊಠಡಿಗೆ ಹೋಗಿ ಅಲ್ಲಿ ಸಿಕ್ಕ ವೈಟ್ ವೈನ್ ಕುಡಿದು,ಒಂದು ಪ್ಲವರ್ ವಾಸ್ (ಆಫ್ರಿಕಾದವರು ಕೊಟ್ಟಿದ್ದ ಗಿಫ್ಟ್) ಅಕಸ್ಮಾತ್ ಆಗಿ ಕೈ ತಾಗಿ ಒಡೆದು ಹಾಕಿದ್ದರು,(ಆ ಕೋಣೆ ಎಲಿಜಬೆತ್ 2 ಅವರ ಅಜ್ಜನಿಗೆ ವಿವಿಧ ದೇಶದವರಿಂದ ಬಂದ ಉಡುಗೊರೆಗಳ ಸಂಗ್ರಹಣೆ ಮಾಡಲು ಮೀಸಲು ಇಡಲಾಗಿತ್ತು),ಕೊನೆಗೆ ಅರಮನೆಯ ಪರಿಚಾರಕಿ ಇವನನ್ನ ನೋಡಿ ಕೂಡಲೇ ಯಾರೋ ಅಪರಿಚಿತ ಇದ್ದಾನೆ ಅರಮನೆ ಒಳಗೆ ಅಂತ ಭದ್ರತಾ ಸಿಬ್ಬಂದಿಗೆ ಸುದ್ದಿ ಮುಟ್ಟಿಸುತ್ತಾಳೆ,
ಸಿಬ್ಬಂದಿ ಕೂಡಲೇ ಕಾರ್ಯ ನಿರತರಾಗಿ ವ್ಯಕ್ತಿಗೆ ಅರಮನೆಯ ಎಲ್ಲಾ ಜಾಗದಲ್ಲಿ ಹುಡುಕಾಡಿದ್ದಾರೆ..ಆದರೆ ಆ ವ್ಯಕ್ತಿ ಎಲ್ಲೂ ಸಿಗಲೇ ಇಲ್ಲ..
ಪರಿಚಾರಕಿ ಸುಮ್ಮನೆ ಹೇಳಿದ್ದಾಳೆ ಅಂತ ಸಿಬ್ಬಂದಿ ಸುಮ್ಮನಾಗ್ತಾರೆ..

ಅಷ್ಟು ಹೊತ್ತಿಗೆ ಆಗಲೇ ಅವನು ಅರಮನೆ ಆವರಣ ಬಿಟ್ಟು ಹೊರಗೆ ಹೋಗಿ ತಪ್ಪಿಸಿ ಕೊಂಡು ಬಿಟ್ಟಿರ್ತಾರೆ...!ಮಾಧ್ಯಮಗಳಲ್ಲಿ ಸುದ್ದಿ ಯಾಗುತ್ತೆ..
ಆದರೆ ಕ್ವೀನ್ ಎಲಿಜಬೆತ್,ಅಧಿಕಾರಿಗಳನ್ನ ಕರೆಸಿ,ಇದನ್ನ ದೊಡ್ಡದು ಮಾಡೋದು ಬೇಡ,ಬಿಟ್ಟು ಬಿಡಿ ಎಂದು ಸಲಹೆ ಕೊಟ್ಟಿದ್ದಾರೆ,ನಂತರ ಅಧಿಕಾರಿಗಳು ತನಿಖೆಯನ್ನ ಗಂಭೀರವಾಗಿ ತೆಗೆದು ಕೊಂಡಿಲ್ಲ..
ಈ ಘಟನೆ ನಡೆದದ್ದು 1982 ಜುಲೈ 9ರಲ್ಲಿ..

ಸರಿಯಾಗಿ ಒಂದು ತಿಂಗಳ ನಂತರ ಮತ್ತೊಮ್ಮೆ ಪಾಗನ್ ತನ್ನ ಮನೆಯಿಂದ ಬೆಳಗಿನ ಜಾವ ಬಸ್ ಹತ್ತಿ 7 ಗಂಟೆಗೆ 𝐖𝐞𝐬𝐭 𝐦𝐢𝐧𝐢𝐬𝐭𝐞𝐫,𝐋𝐨𝐧𝐝𝐨𝐧 ನಲ್ಲಿರುವ ಬಕಿಂಗ್ ಹ್ಯಾಮ್ ಪ್ಯಾಲೇಸ್ ಗೆ ಬಂದು ಹೊಂಚು ಹಾಕಿ,ಡ್ರೈನ್ ಪೈಪ್ ಹತ್ತಿ,ಗೋಡೆಗೆ ಹಾಕಿದ್ದ ಮುಳ್ಳು ತಂತಿ ಕಟ್ ಮಾಡಿ,ಕಾಂಪೌಂಡ್ ವಾಲ್ ಹಾರಿದ್ದಾರೆ..
ಅಲ್ಲಿದ್ದ ಡಿಟೆಕ್ಟರ್ ಶಬ್ದಮಾಡಿದೆ,ರಾತ್ರಿಯ ಪಾಳಯದ ಭದ್ರತಾ ಸಿಬ್ಬಂದಿ ತನ್ನ ಕೆಲಸ ಮುಗಿಸಿ ಬೆಳಗಿನ ಪಾಳಯದವರಿಗೆ ವಹಿಸಿ ಹೊರಟಿರುತ್ತಾರೆ ಅಷ್ಟೇ,
ಅಲರಾಮ್ ಶಬ್ದ ಬಂದ ಕೂಡಲೇ ಸಿಬ್ಬಂದಿ ಬಂದು ಕೂಡಲೇ ಪರಿಶೀಲನೆ ಮಾಡಿದಾಗ ಯಾವ ವ್ಯಕ್ತಿಯು ಕಾಣಲಿಲ್ಲ..
ಓಹ್ ಇದು
ಪಾಲ್ಸ್ ಅಲಾರಂ ಇರಬೇಕು ಅಂತ ನಿರ್ಧರಿಸಿ ಸುಮ್ಮನಾಗಿದ್ದಾರೆ..

ಆದ್ರೆ ಪಾಗನ್ ಒಬ್ಬೊಬ್ಬರೇ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ,ಕಿಟಕಿಯ ಗಾಜು ಒಡೆದು,ಕಿಟಕಿ ಬಾಗಿಲು ತೆಗೆದು,ಅರಮನೆ ಆವರಣದ ಒಳಗೆ ಬಂದು
ನಿಧಾನವಾಗಿ ಅರಮನೆಯ ಒಂದೊಂದೇ ಕೊಠಡಿ ದಾಟುತ್ತಾ ಬಂದು,ಅಲ್ಲಿದ್ದ ಒಂದು ಗ್ಲಾಸ್ ಆಶ್ ಟ್ರೇ ಕೈಯಲ್ಲಿ ಒಡೆದು ಗಾಯ ಮಾಡಿಕೊಂಡು,
ಕ್ವೀನ್ ಎಲಿಜಬೆತ್-2 ಕೋಣೆಗೆ ಬಂದು,ಬೆಳಗಿನ ಜಾವ ನಿದ್ರೆಯಲ್ಲಿದ್ದ ರಾಣಿಗೆ ತಿಳಿಯದಂತೆ ಕಿಟಕಿ ಹತ್ತಿರ ಹೋಗಿದ್ದಾರೆ,
ದೊಡ್ಡ ಕಿಟಕಿಯ ಕರ್ಟನ್ ನಿಧಾನಕ್ಕೆ ಸರಿಸಿದ್ದಾರೆ..

ರಾಣಿ ಶಬ್ದ ಕೇಳಿ ಮಲಗಿದ್ದಲ್ಲೇ ಪರಿಚಾರಕಿ ಇರಬೇಕು ಎಂದು ಕೊಂಡು..
"ಇಷ್ಟು ಬೇಗ ಯಾಕೆ ಬಂದಿದ್ದು"ಅಂತ ಮಲಗಿದ್ದಲ್ಲೇ ಕೇಳಿದ್ದಾರೆ 
ಆದರೆ ಉತ್ತರ ಬಂದಿಲ್ಲ..!

"ಇವತ್ತು ಬೇಗ ಎಬ್ಬಿಸಬೇಕು ಅಂತ ತೀರ್ಮಾನ ಮಾಡಿದ್ದೀಯಾ ಅಂತ ಕಾಣುತ್ತೆ"ಎಂದು ಹೇಳುತ್ತಾ ಕಣ್ಣು ಬಿಟ್ಟು ನೋಡಿದ್ದಾರೆ...

ಅಪರಿಚಿತ ಅಜಾನುಬಾಹು ವ್ಯಕ್ತಿ ಕಣ್ಣು ಮುಂದೆ ನಿಂತಿದ್ದಾನೆ..
ಗಾಬರಿಯಾಗಿ 
ಕೂಡಲೇ ಭದ್ರತಾ ಸಿಬ್ಬಂದಿ ಕರೆಯಲು ಪ್ರಯತ್ನ ಮಾಡಿದ್ದಾರೆ,ಸಿಬ್ಬಂದಿ ರಾಣಿಯ ನಾಯಿ ಕೂರ್ಗಿ ಯನ್ನ ವಾಕಿಂಗ್ ಕರೆದು ಕೊಂಡು ಹೋಗಿರ್ತಾರೆ..

ಆದರೆ ಪಾಗನ್ ನಿಧಾನಕ್ಕೆ ಹತ್ತಿರ ಬಂದು ನಾನೇನು ಮಾಡಲ್ಲ..
𝐘𝐨𝐮𝐫 𝐡𝐢𝐠𝐡𝐧𝐞𝐬𝐬 ನಾನು ಕಳ್ಳ ಅಲ್ಲ,
ನಿಮ್ಮ ಹತ್ರ ಮಾತಾಡಬೇಕು ಕೆಲವೇ ನಿಮಿಷ ಅಷ್ಟೇ ಎಂದು ಅವರ ಬೆಡ್ ನಲ್ಲೇ ಪಕ್ಕ ಕುಳಿತು ಕೊಳ್ತಾರೆ..

ರಾಣಿ.. 
"ಇದು ಪ್ರೈವೇಟ್ ಪ್ರಾಪರ್ಟಿ,
ನೀನು ಹೇಗೆ ಒಳಗೆ ಬಂದೆ,ಹಾಗೆಲ್ಲಾ ಬರಬಾರದು ಅಂತ ಗೊತ್ತಿಲ್ವಾ"ಕೇಳ್ತಾರೆ,

"ಇದು ಪ್ರೈವೇಟ್ ಅಲ್ಲ ದೇಶದ ಪ್ರಾಪರ್ಟಿ"ಅಂತಾರೆ ಪಾಗನ್,
ರಾಣಿ,ಪಾಗನ್ ಕೈಯನ್ನ ನೋಡಿ,
"ಗಾಯವಾಗಿದೆ ರಕ್ತ ಸುರಿತಾ ಇದೆ,ಬಾತ್ ರೂಮ್ ಅಲ್ಲಿದೆ,ಹೋಗಿ ಕೈ ತೊಳೆದು ಕೊಳ್ಳಿ"ಅಂತ ಹೇಳುತ್ತಾರೆ,
ರಾಣಿ ಅನುಮತಿ ಕೊಟ್ಟ ಕೂಡಲೇ ಬಾತ್ ರೂಮ್ ಗೆ ಹೋಗಿ,ಗ್ಲಾಸ್ ಒಡೆದು ಗಾಯವಾಗಿದ್ದ ಕೈ ತೊಳೆಯುತ್ತಾ ಇರುವ ಸಮಯದಲ್ಲಿ,ರಾಣಿ,ಎಮರ್ಜನ್ಸಿ ಬೆಲ್ ಹಲವು ಸಲ ಒತ್ತುತ್ತಾರೆ,ಆದರೆ ಯಾರೂ ಸ್ಪಂದನೆ ಮಾಡಲ್ಲ..
ಪರಿಚಾರಕಿ ಬೇರೆ ಜಾಗದಲ್ಲಿ ವ್ಯಾಕ್ಯೂಮ್ ಕ್ಲಿನರ್ ಬಳಸಿ ಕೆಲಸ ಮಾಡುತ್ತಾ ಇರುವಾಗ ಅವರು ಶಬ್ದ ಕೇಳಿರುವುದಿಲ್ಲ,ಹಾಗಾಗಿ ಗಮನಿಸಿರಲ್ಲ..

ಇತ್ತ ಪಾಗನ್ ರಾಯಲ್ ಪ್ಯಾಮಿಲಿ ಬಾತ್ ರೂಮ್ ರಾಣಿಯ ಬಾತ್ ರೂಮ್ ಹೇಗಿರುತ್ತೆ ಅಂತ ಕುತೂಹಲದಿಂದ ನೋಡುತ್ತಾ ಕೈ ತೊಳೆದು..ಅಲ್ಲೇ ಇದ್ದ ಟೂತ್ ಬ್ರಶ್ ನೋಡಿ ಹಿಡಿದು ಹೊರ ಬಂದು, "ಇದೇನು ಸಾಮಾನ್ಯ ಟೂತ್ ಬ್ರಶ್,ಎಲೆಕ್ಟ್ರಿಕ್ ಇಟ್ಟಿಲ್ವಾ!?ಜಗತ್ತಿನ ಶ್ರೀಮಂತಾ ಮಹಿಳೆ ಆಗಿ ನೀವು ಈ ಟೂತ್ ಬ್ರಶ್ ಬಳಸೋದಾ"
ಅಂತ ಆಶ್ಚರ್ಯದಿಂದ ಪ್ರಶ್ನೆ ಕೂಡಾ ಮಾಡ್ತಾರೆ ಪಾಗನ್..

"ರೂಮಿನ ಬಣ್ಣ ಹಲವು ಕಡೆ ಹೋಗಿದೆ,ವಾಲ್ ಪೇಪರ್ ಹಳೆದು ಆಗಿದೆ,ಬಾತ್ ರೂಮ್ ಅಷ್ಟೇ ಏನಿದು ರಾಯಲ್ ಬೆಡ್ ರೂಮ್ ಹೀಗಿದೆ"ಅಂತಾರೆ..

ಅದಕ್ಕೆ ರಾಣಿ ನಕ್ಕು ಸುಮ್ಮನಾಗಿ,ಕುಳಿತು ಕೊಳ್ಳೋಕೆ ಹೇಳಿ.
"ನೀನು ಅದೇ ಕೆಲಸ ಮಾಡೋದಾ"ಅಂತ ಕೇಳ್ತಾರೆ..

ಪಾಗನ್... ಹೌದು...
ಈಗ
ಕೆಲಸವಿಲ್ಲ,ಸರ್ಕಾರದ ಭತ್ಯೆಯಿಂದ ಜೀವನ ಮಾಡ್ತಾ ಇದ್ದೇನೆ,
ನಾನು ಈಗ ಬಡವನಾಗಿದ್ದೇನೆ,ಹಣವಿಲ್ಲ ಅಂತ ಹೆಂಡತಿ ಮಕ್ಕಳು ಬಿಟ್ಟು ಹೋದ್ರು...
ಎಂದು ತನ್ನ ಸಂಕಷ್ಟ ಹಾಗೂ ದೇಶದ ಸಂಕಷ್ಟ,ಥ್ಯಾಚೆರ್ ರ ಆಡಳಿತ ವೈಖರಿ ಬಗ್ಗೆ,ಯುದ್ಧ ಘೋಷಣೆ ಬಗ್ಗೆ,ಜನಗಳ ಅಭಿಪ್ರಾಯ ಎಲ್ಲಾ ಹೇಳಿ, ಅಸಮಾಧಾನ ವ್ಯಕ್ತ ಮಾಡುತ್ತಾ ಎಲ್ಲಾ ವಿವರಿಸುತ್ತಾರೆ..
ರಾಣಿ ಎಲ್ಲಾ ಸಮಚಿತ್ತದಲ್ಲಿ ಗಾಬರಿ,ಭಯ ಇಲ್ಲದೇ ಕೇಳಿಸಿ ಕೊಳ್ಳುತ್ತಾರೆ..
 
ಕೆಲವು ಸಮಯದ ನಂತರ
ರಾಣಿಯ ಮಲಗುವ ಕೋಣೆಗೆ ಪರಿಚಾರಕಿ ದಿನ ನಿತ್ಯ ಬೆಳಿಗ್ಗೆ ರಾಣಿಗೆ ಟೀ ಕೊಡುವ ಸಮಯಕ್ಕೆ ಟೀ ಟ್ರೇ ಹಿಡಿದು ಬೆಡ್ ರೂಮ್ ಗೆ ಬರುತ್ತಾರೆ...

ಅಲ್ಲಿರುವ ಅಪರಿಚಿತ ವ್ಯಕ್ತಿ ರಾಣಿಯ ಪಕ್ಕದಲ್ಲಿ ಇರೋದನ್ನ ನೋಡಿ ಗಾಬರಿಯಾಗಿ..

"ನೀವು ಚನ್ನಾಗಿದ್ದೀರಾ ನಿಮಗೇನು ತೊಂದರೆ ಆಗಿಲ್ಲ ಅಲ್ವಾ"ಅಂತ ರಾಣಿಯನ್ನ ಕೇಳ್ತಾರೆ..

"ರಾಣಿ ನಂಗೆ ಏನೂ ಆಗಿಲ್ಲ.. 

ಭದ್ರತಾ ಸಿಬ್ಬಂದಿ ಕರೆ ತನ್ನಿ"ಅಂತ ಹೇಳುತ್ತಾರೆ..

ಸಿಬ್ಬಂದಿ ಬರುವವರೆಗೆ ಪಾಗನ್ ಸ್ಥಿತ ಪ್ರಜ್ಞನಾಗಿ,ಯಾವುದೇ ಭಯ ಇಲ್ಲದೇ ಅಲ್ಲೇ ಕುಳಿತಿರುತ್ತಾರೆ...

ಕೊನೆಗೆ ಸಿಬ್ಬಂದಿ ಬಂದ ಕೂಡಲೇ ಪಾಗನ್ ಎದ್ದು ರಾಣಿಗೆ ಕೈ ಕೊಟ್ಟು ವಿಶ್ ಮಾಡಲು ಮುಂದಾಗ್ತಾರೆ ಪಾಗನ್,
ಅಲುಗಾಡಬೇಡ ಅಂತ ಕೂಡಲೇ ಸಿಬ್ಬಂದಿ ಎಚ್ಚರಿಕೆ ಕೊಡ್ತಾರೆ..

ಅದಕ್ಕೆ ರಾಣಿ ಪರವಾಗಿಲ್ಲ ಅವರು ನನಗೆ ಅಪಾಯ ಏನೂ ಮಾಡಲ್ಲ ಅಂತ ಹೇಳಿ,
ಕೈ ಕೊಟ್ಟ ನಂತರ ಸಿಬ್ಬಂದಿ ಅವರನ್ನ ವಶಕ್ಕೆ ತಗೊಳ್ತಾರೆ,ಕರೆದು ಕೊಂಡು ಹೋಗ್ತಾರೆ..

ಮತ್ತೆ ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತೆ,ಭದ್ರತೆಯ ಬಗ್ಗೆ ಚರ್ಚೆ ಶುರುವಾಗುತ್ತೆ..
ಆಗಿನ ಉಕ್ಕಿನ ಮಹಿಳೆ ಪ್ರಧಾನಿ ಮಾರ್ಗರೇಟ್ ಥಾಚರ್,ರಾಣಿಯ ಅರಮನೆಯ ಭದ್ರತಾ ಲೋಪದ ಬಗ್ಗೆ ಕ್ಷಮೆ ಕೋರಲು ದಾವಿಸುತ್ತಾರೆ..
ರಾಣಿ..ಆಗ ಪ್ರಶ್ನೆ ಮಾಡ್ತಾರೆ ಏನು ನಡೀತಾ ಇದೇ ನಮ್ಮ ದೇಶದಲ್ಲಿ..ಅಂತ ಪಾಗೇನ್ ಕೇಳಿದ ಪ್ರಶ್ನೆ ಕೇಳ್ತಾರೆ ಥ್ಯಚರ್ ತಮ್ಮ ಸಮರ್ಥನೆ ಮಾಡಿ ಕೊಳ್ತಾರೆ..
ಅದನ್ನ ಥಾಚರಿಸಮ್ ಅಂತ ಆಗಿನ ಕಾಲದಲ್ಲಿ ಕರೆಯಲಾಗುತ್ತಾ ಇತ್ತು .

ಆದ್ರೆ ಮೈಕೆಲ್ ಪಾಗನ್ ಲಕ್ಕಿ, ಆಗಿನ ಬ್ರಿಟನ್ ಕಾನೂನು ಪ್ರಕಾರ ಮನೆ ನುಗ್ಗೋದು ಬಹಳ ದೊಡ್ಡ ಅಪರಾಧವಲ್ಲ ಸಿವಿಲ್ ಅಪರಾಧವಾಗಿತ್ತು,ಹಾಗಾಗಿ ಪಾಗನ್ ವೈನ್ ಕಳ್ಳತನದ ಅಪರಾಧದ ಮೇಲೆ ಕೆಲವು ಸಮಯ ಜೈಲು ಶಿಕ್ಷೆ ಆಗುತ್ತೆ ಅಷ್ಟೇ,ಜನವರಿ 1983ರಲ್ಲಿ ಪಾಗನ್ ಮಾನಸಿಕ ಸಮಸ್ಯೆಗಾಗಿ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಹೊರಗೆ ಬಂದಿರ್ತಾರೆ,ಈ ಘಟನೆ ನಂತರ,ಮಾನಸಿಕ ಆರೋಗ್ಯ ಸಮಸ್ಯೆಗಾಗಿ 3 ತಿಂಗಳು ಆರೋಗ್ಯ ಕೇಂದ್ರಕ್ಕೆ ಮತ್ತೆ ದಾಖಲೆಯಾಗ್ತಾರೆ ಪಾಗನ್..

ಆಮೇಲೆ ಗುಣ ಮುಖರಾಗಿ ಲಂಡನ್ ನಲ್ಲೇ ಜೀವನ ನಡೆಸುತ್ತಾ ಇರುತ್ತಾರೆ..

1997ರಲ್ಲಿ ಡ್ರಗ್ ಸಪ್ಲೈ ಕೇಸ್ನಲ್ಲಿ ಅವರ ಮಗನ ಸಹಿತ ಮತ್ತೊಮ್ಮೆ ಬಂದಿತರಾಗಿ ಜೈಲು ಶಿಕ್ಷೆ ಆಗುತ್ತೆ ಮೈಕೆಲ್ ಪಾಗನ್ ಗೆ..
ಈಗಲೂ ಮೈಕೆಲ್ ಪಾಗಲ್ ಲಂಡನ್ ನಲ್ಲಿ ಜೀವನ ನಡೆಸುತ್ತಾ ಇದ್ದಾರೆ..
ಒಮ್ಮೆ ಹಾರ್ಟ್ ಅಟ್ಯಾಕ್ ಆಗಿತ್ತು ಹಾಗೆ ಇತ್ತೀಚೆಗೆ ಅವರಿಗೆ ಕೋವಿಡ್ 19 ಬಂದಿತ್ತಂತೆ..

"𝐏𝐞𝐨𝐩𝐥𝐞 𝐰𝐡𝐨 𝐡𝐚𝐯𝐞 𝐝𝐨𝐧𝐞 𝐦𝐚𝐫𝐯𝐞𝐥𝐨𝐮𝐬 𝐭𝐡𝐢𝐧𝐠𝐬 𝐠𝐞𝐭 𝐭𝐨 𝐤𝐧𝐞𝐞𝐥 𝐢𝐧 𝐟𝐫𝐨𝐧𝐭 𝐨𝐟 𝐡𝐞𝐫 𝐭𝐨 𝐛𝐞 𝐡𝐨𝐧𝐨𝐫𝐞𝐝," 𝐅𝐚𝐠𝐚𝐧 𝐬𝐚𝐢𝐝, "𝐛𝐮𝐭 𝐈 𝐚𝐜𝐭𝐮𝐚𝐥𝐥𝐲 𝐬𝐚𝐭 𝐨𝐧 𝐡𝐞𝐫 𝐛𝐞𝐝 𝐚𝐧𝐝 𝐚𝐥𝐦𝐨𝐬𝐭 𝐠𝐨𝐭 𝐭𝐨 𝐭𝐚𝐥𝐤 𝐭𝐨 𝐡𝐞𝐫."

ದೊಡ್ಡ ಸಾಧಕರು,ಅದ್ಬುತ ಕೆಲಸ ಮಾಡಿದವರು ರಾಣಿಯ ಎದುರು ಮಂಡಿಯೂರು ಗೌರವ ಸೂಚನೆ ಮಾಡ್ತಾರೆ,ಆದರೆ ನಾನು ಅವರ ಹಾಸಿಗೆಯ ಮೇಲೆ ಕುಳಿತು ಮಾತನಾಡಿದ್ದೇನೆ..
ಅಂತ ಹೆಮ್ಮೆ ಹಾಗೂ ಖುಷಿ ಯಿಂದ ಹೇಳ್ತಾರೆ
ಮೈಕೆಲ್ ಪಾಗನ್..

2005ರಲ್ಲಿ ಸರ್ಕಾರ ಕಾನೂನು ಬದಲಾವಣೆ ಮಾಡಿ ಬಕಿಂಗ್ ಹ್ಯಾಮ್ ಪ್ಯಾಲೇಸ್ ನ್ನ 𝐃𝐞𝐬𝐢𝐠𝐧𝐚𝐭𝐞𝐝 𝐒𝐢𝐭𝐞 ಎಂದು ಘೋಷಣೆ ಮಾಡಿ,ಅನುಮತಿ ಇಲ್ಲದೇ ಅರಮನೆಗೆ ಪ್ರವೇಶ ಮಾಡಿದರೆ ಅದು ಗಂಭೀರ ಅಪರಾಧ ಎಂದು ತಿದ್ದು ಪಡಿ ಮಾಡಲಾಯ್ತು..
(ವಿ.ಸೂ:-ಈ ಘಟನೆ ಹಲವು ರೀತಿಯ ವ್ಯಾಖ್ಯಾನವೂ ಮಾಡಿದ್ದಾರೆ ಹಲವರು,ನನಗೆ ಸಿಕ್ಕ ಮಾಹಿತಿ ನನ್ನದೇ ರೀತಿಯಲ್ಲಿ ಇಲ್ಲಿ ಬರೆದಿದ್ದೇನೆ..!)