ಕೆಲವು ದಿನದ ಹಿಂದೆ ನಾನು ಮತ್ತೆ ನನ್ನ ಒಬ್ಬ ತಮಿಳುನಾಡಿನ ಸ್ನೇಹಿತರು ಒಬ್ಬರ ಜೊತೆ ಬ್ರಾಡ್ ಪರ್ಡ್ ನಗರದ ಬೀದಿ ಸುತ್ತುತ್ತಾ,ಸಂಜೆಯ ಹೊತ್ತಿಗೆ ಮನೆಗೆ ಹೊರಡಲು ಬ್ರಾಡ್ಪರ್ಡ್ ಇಂಟರ್ ಚೆಮ್ಜ್ ರೈಲ್ವೆ ನಿಲ್ದಾಣದ ಕಡೆ ಹೆಜ್ಜೆ ಹಾಕುತ್ತಾ ಇದ್ದೆವು,ತಣ್ಣನೆ ಗಾಳಿ ಇನ್ನೇನು ಮಳೆ ಬರುವ ಸಾಧ್ಯತೆ ಇದೆ ಎಂದು ಕೊಂಡು ಕಾಲನ್ನ ಸ್ವಲ್ಪ ಚುರುಕಾಗಿ ಹಾಕುತ್ತಾ ಹೊರಟೆವು..
ಹಿಂಬದಿಯಿಂದ,
ತಂಬಿ,ನಲ್ಲ ಇರುಕಾ ಅಂತ ಯಾರೋ ಕೇಳಿದ ಹಾಗೆ ಆಯ್ತು..
ನೋಡಿದರೆ ಸುಮಾರು 65 ವರ್ಷದ ಮೇಲೆ ವಯಸ್ಸಾಗಿರುವ ವ್ಯಕ್ತಿ ನನ್ನ ಸ್ನೇಹಿತ ರನ್ನ ಕರೆದು ಮಾತಾಡಿಸಿದ್ದು.,
"ಇವರ ಯಾರೋ ಪರಿಚಯಸ್ಥರು ಇರಬಹುದಾ!?
ಈ ದೊಡ್ಡ ನಗರದಲ್ಲಿ ಹಿಂದಿನಿಂದ ಕಂಡು ಹಿಡಿದು ಮಾತಾಡಿಸಿದ್ರಲ್ಲ...ಗ್ರೇಟ್,
ಅಥವಾ ಸಂಬಂಧಿ ಯಾರಾದ್ರೂ ಇರಬಹುದಾ..ಅಂತ ಮನಸ್ಸಲ್ಲೇ ಸುಮಾರು ಪ್ರಶ್ನೆಗಳನ್ನ ಮಾಡಿ ಕೊಂಡೇ.."
ಅಷ್ಟು ಹೊತ್ತಿಗೆ ಸುಮಾರು ಉಭಯ ಕುಶಲೋಪರಿ ಅಚ್ಚ ತಮಿಳಿನಲ್ಲೇ ಮುಗಿಸಿ,ಊರು,ಮನೆ ಎಲ್ಲಿರೋದು,ಇಲ್ಲಿ ಯಾರ ಜೊತೆ ಇರೋದು,ಬಂದು ಎಷ್ಟು ದಿನ ಆಯ್ತು,ತ.ನಾಡಿನಲ್ಲಿನ ವೈರಸ್ ವಿಚಾರ ಹೀಗೆ ಸುಮಾರು ವಿಚಾರ ವಿನಿಮಯ ಮಾಡಿಕೊಂಡು ಬಿಟ್ಟಿದ್ರು ಇಬ್ಬರೂ..
ಕೊನೆಗೆ,ಖುಷಿ ಆಯ್ತು ನಿಮ್ಮನ್ನ ಭೇಟಿಯಾಗಿ ಅಂತ, ಬೀಳ್ಕೊಡಿಗೆ ಸಮಾರಂಭ ಕೂಡ ನಡೆಯಿತು..
ಸ್ನೇಹಿತರನ್ನ ಕೇಳಿದೆ ನಿಮಗೆ ಪರಿಚಯ ಮೊದಲೇ ಇತ್ತಾ ಅಂತ..
ಹೇ...ಇಲ್ಲ ಸಾರ್...
ನನ್ನ ಹಿಂದಿನಿಂದ ನೋಡಿ ತಮಿಳು ನವನು ಅಂತ ಗುರುತಿಸಿ ಬಂದು ಮಾತಾಡಿಸಿ ಹೋದರು..
ಯಾರು ಅಂತ ನಂಗೆ ಗೊತ್ತೇ ಇಲ್ಲ ಅಂದ್ರು..!!?
ನಾನು 😳
ಹೋದ ವಾರ..
Yorkshire Dale National park ಅಂತ ಒಂದು ಜಾಗವಿದೆ,ಬಹಳ ವಿಸ್ತಾರವಾದ ಗುಡ್ಡ ಬೆಟ್ಟ ಹಾಗೂ ಹುಲ್ಲುಗಾವಲು ಪ್ರದೇಶ,ಅಲ್ಲಿಗೆ ಹೈಕಿಂಗ್,ವಾಕಿಂಗ್,ಪಿಕ್ನಿಕ್ ಗೆ ಬಂದು ಕೆಲವು ಚಾಲೆಂಜ್ ತಗೊಂಡು ಜನರು ಬೆಟ್ಟ ಹತ್ತೋದು ಬಹಳ ಸಾಮಾನ್ಯ..
ಆ ಜಾಗಕ್ಕೆ ನಮ್ಮ ಊರಿನ ಒಂದು ಕುಟುಂಬದ ಜೊತೆ ಅಲ್ಲಿ ಹೋಗಿದ್ದೆವು..
ಕೆಲವು ಕಡೆ ಹೈಕಿಂಗ್ ಮುಗಿಸಿ,ಕೊನೆಗೆ Horton in ribblesdale ಎಂಬ ಜಾಗಕ್ಕೆ ಬಂದು,ಮನೆಯಿಂದ ತಂದಿದ್ದ ಊಟ ಮಾಡಲು ಅಚ್ಚುಕಟ್ಟಾದ ಜಾಗ ಹುಡುಕುತ್ತಾ ಹೋಗಿ ಒಂದು ಮರದ ಕೆಳಗೆ ಕುಳಿತು ಊಟ ಮಾಡಿ ವಾಪಾಸ್ ಅದೇ ದಾರಿಯಲ್ಲಿ ಹೊರಟು,
ನಡೆದು ಬರುತ್ತಾ ಇರುವಾಗ ದೂರದಿಂದ ಜೋರಾಗಿ ಕನ್ನಡ ಮಾತಾಡುತ್ತಾ ಬರುತ್ತಾ ಇರುವ ಕುಟುಂಬ ಕಾಣಿಸ್ತು..
ಹತ್ತಿರ ಬಂದಾಗ,
ಓಹ್..ನಮ್ಮೂರು ನವರು ಅಂತ,
ಸಹಜವಾಗಿ ಮುಖ ನೋಡಿ ನಕ್ಕು,ಬೆಂಗಳೂರು ಅಲ್ವಾ ಅಂದೇ..!
"Ya.."ಅಂತ ಸಣ್ಣ ಶಬ್ದ ತೆಗೆದು ಮುಖದ ಮೇಲೆ ಬಿಸಾಡಿದ್ರು,ಬಿಟ್ಟರೆ ಸಣ್ಣ ನಗುವಿನ ಸಾಲವನ್ನೂ ತೀರಿಸಲಿಲ್ಲ,
ಒಂದೇ ಒಂದು ಬೇರೆಯ ಶಬ್ದ ಬರಲಿಲ್ಲ,
ನನಗೆ,
ನೀನು ಯಾವ ನಾಯಿ ಸಂತೆ ಅಂತಲೂ ಕೇಳಲಿಲ್ಲ..!
ಎದೆ ಉಬ್ಬಿಸಿ ಕೊಂಡು,ನೀನ್ಯಾವನೋ ಕನ್ನಡದಲ್ಲಿ ಮಾತಾಡಿಸ್ತೀಯಾ ಅಂತ ಅನ್ನೋ ಹಾಗೆ ನಮ್ಮನ್ನ ದಾಟಿ ಹೋಗೇ ಬಿಟ್ಟರು..!
ನಮ್ಮಿಂದ ಸ್ವಲ್ಪ ಅಡಿ ದೂರ ಹೋಗಿ..
ಅಲ್ಲೇ ನಡೆದು ಬರುತ್ತಾ ಇದ್ದ ಬ್ರಿಟೀಷ್ ಮಹಿಳೆಯ ತಡೆದು ಅವರ ಹತ್ರ,
ನಗು ನಗುತ್ತಾ ಇಲ್ಲಿ ಎಲ್ಲಿಯಾದ್ರು ಕೂರೋಕೆ ಜಾಗ ಇದ್ಯಾ,
ಕೆಫೆ ಇದಿಯಾ ಅಂತ ಅಚ್ಚ ಆಂಗ್ಲ ಭಾಷೆಯಲ್ಲಿ ವಿಚಾರಿಸಿಕೊಂಡು,ದೊಡ್ಡ ಧನ್ಯವಾದ ಅರ್ಪಿಸಿ
ಅಲ್ಲಿಂದ ಜಾಗ ಬಿಟ್ಟರು..
ನಾನು ಆ ಬ್ರಿಟೀಷ್ ಮಹಿಳೆಯನ್ನ ನೋಡಿ ಒಂದು ಸಣ್ಣ ನಗು ನಕ್ಕೆ,
ಹೇಗಿದಿರಿ?
ಹೈಕಿಂಗ್ ಚನ್ನಾಗಿತ್ತಾ?
ಇವತ್ತು ದಿನ ಚನ್ನಾಗಿದೆ ಅಲ್ವಾ?
ಎಂಜಾಯ್ ಮಾಡಿ..
ಚಿಯರ್ಸ್ ಅಂತ ಬಾಯ್,ಬಾಯ್..ಎಂದು ಹೋದ್ರು,
ನನ್ನ ಕೇವಲ ಒಂದು ಸಣ್ಣ ನಗುಗೆ ಅಷ್ಟು ಬಾಯಿ ತುಂಬಾ ಮಾತು ಆಡಿ,ನನಗೆ ನಗು ಹಾಗೂ ಮಾತಿನ ಸಾಲ ಕೊಟ್ಟು,
ಖುಷಿಯಿಂದ ಹೊರಟು ಹೋದರು...!
ನನಗೆ ನಮ್ಮ ಕನ್ನಡದವರ ವರ್ತನೆ ನಿಜಕ್ಕೂ ಬಹಳ ಬೇಸರ ತರಿಸಿತು..
ಇಷ್ಟ್ಯಾಕ್ ನಮ್ಮ ಭಾಷೇ ಹಾಗೂ ನಮ್ಮವರ ಮೇಲೆ ತಾತ್ಸಾರವೋ..!
ಈ ರೀತಿಯ ಅನುಭವ ನನಗೆ ಹೊರ ದೇಶದಲ್ಲಿ ಆಗಿದ್ದು ಇದೇ ಮೊದಲೇನಲ್ಲ..!
ಹಲವು ಸರಿ,ಹಲವು ಪ್ರದೇಶಗಳಲ್ಲಿ ಆಗಿದೆ..
ಎಲ್ಲಾದರೂ ಪ್ರವಾಸಕ್ಕೆ ಹೋದಾಗ..
ಓಹ್..ಸೌತ್ ಇಂಡಿಯನ್ ಅಂತ ಬಂದು ಮಾತಾಡಿಸೋ..
ಮರಾಠಿ,ಒರಿಸ್ಸಾ,ಪಂಜಾಬಿ,ಬೆಂಗಾಲಿ,ಗುಜರಾತಿ,ಇದ್ದಾರೆ..
ಬೆಂಗಳೂರ ಅಂತ ಮಾತಾಡಿಸೋ,ತಮಿಳು,ಮಲೆಯಾಳಿ,ತೆಲುಗರು ಸಿಕ್ತಾರೆ..
ಆದರೆ ಕನ್ನಡದವರೆ ನಮ್ಮವರು ನೀವು ಅಂತ ನಾಲ್ಕು ಮಾತಾಡದೇ ಹೋದಾಗ ಸ್ವಲ್ಪ ಬೇಸರ ನನಗೆ ಮಾತ್ರ ಆಗುತ್ತಾ ಅಥವಾ ಎಲ್ಲರಿಗೂ ಆಗುತ್ತಾ ನನಗೆ ಗೊತ್ತಿಲ್ಲ..!
ಆದರೆ ಕೆಲವು ಕನ್ನಡಿಗರು ಹೀಗೆ ಎಲ್ಲೋ ದಾರಿಯಲ್ಲಿ ಸಿಕ್ಕಿ ಆತ್ಮೀಯವಾಗಿ ಮಾತಾಡಿ,ಇಂದಿಗೂ ಉಭಯ ಕುಶಲೋಪರಿ ಮಾತಾಡಿಸೋಕೆ ಕರೆ ಮಾಡೋರು ಇದ್ದಾರೆ..
ಆದರೆ ಅಂತವರ ಪ್ರಮಾಣ ಕಡಿಮೆ ಅನ್ನೋದು ನೋವಿನ ಸಂಗತಿ..
ಎಲ್ಲಾದರೂ ಇರು,ಎಂತಾದರು ಇರು,ಎಂದೆಂದಿಗೂ ನೀ ಕನ್ನಡವಾಗಿರು..
ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಅನ್ನೋದು ಇಂತವರು ಓದಿ ಅರ್ಥ ಮಾಡಿಕೊಂಡಿಲ್ಲ ಅನಿಸುತ್ತೆ..
🙏