ಪದ್ದಮ್ಮ...
ಮನೆಯಲ್ಲಿ ಕಟ್ಟೆ ಮೇಲೆ ಕೂತವರು ಇಣುಕಿ,ಬಗ್ಗಿ ನೋಡಿ,ಕೂಗಿ ಹೇಳ್ಯಾತು....
"ಏಯ್..ಮಾಣಿ...
ಅದ್ಯಾರ ಉಣುಗೋಲು ಹತ್ರ ತಲೆ ಮೇಲೇ ಗಂಟು ಇಟ್ಟ ಕಂಡು ಬರ್ತಾ ಇರಂಗೆ ಕಾಣುತ್ತೆ..
ಯಾರು ನೋಡ ಮಾಣಿ..
ಬಳೆಗಾರ್ತಿಯಾ ಅಂತ...!"
ಮಾಣಿ...
ಬುರ್ರು..ಬುರ್ರು...ಬಾಯಿಂದ ಎಂಜಲು ಹಾರಿಸುತ್ತಾ ಬಸ್ ಬಿಟ್ ಗಂಡು,ಹೋಗಿ ನೋಡಿಕಂಡು ಬಂದು ಕೂಗಿ ಹೇಳ್ ಯಾತು..
"ಬಳೆಗಾರ್ತಿ ಬಂದುದಾರೆ
ದೊಡ್ಡಮ್ಮ.."
ಓಹ್ ಹೌದಾ..
"ಸುಮಾರು ದಿನಾ ಆಗಿತ್ತು ಅವಳು ಈ ಕಡೆ ಬರದೇ.
ಶ್ರಾವಣ,ಗೌರಿ ಹಬ್ಬ ಬೇರೆ ಹತ್ರ ಬರ್ತಾ ಅದೇ ಅದಕ್ಕೆ ನಿಧಾನಕ್ಕೆ ಈ ಕಡೆ ಬಂತು ಇವಳದ್ದು ಸವಾರಿ.."
"ಬಾರೇ....ಎಂತು ಸುಮಾರು ಸಮಯ ಆಗಿತ್ತು ಈ ಕಡೆ ಬರದೇ..
ಹುಷಾರಿದಿಯಾ..!?
ಬಾ ಕೂತಕಾ, ನೀರು ಬೇಕಾ..!?"
ಅಂತ
ಪದ್ದಮ್ಮ ಬಳೆಗಾರ್ತಿ ಉಭಯ ಕುಶಲೋಪರಿ ಕೇಳಿ ಕೂರೋಕೆ ಹೇಳಿದ್ರು...
ಬಳೆಗಾರ್ತಿ
ತಲೆ ಮೇಲಿನ ಗಂಟು ಇಳಿಸಿ...
"ಏನಮ್ಮ,ಆರಾಮಾ" ಅಂತ..
ಕೂತವಳೇ
ಬಳೆ ಗಂಟು ಬಿಚ್ಚಿ,
ಹಸಿರು,ಕೆಂಪು,ನೀಲಿ,ಗಚ್ಚಿನ ಬಳೆ, ಪ್ಲೇನ್ ಬಳೆ ಇನ್ನೂ ತರ ತರದ ಬಳೆ ತೆಗೆದು ತೆಗದು ಇಡೋಕೆ ಶುರು...
"ಏಯ್..ಮಾಣಿ,
ಮೇಲಿನ ಮನೆ ಸರಸ್ವತಮ್ಮ,
ತೋಟದೆ ಮನೆ ಗೌರಮ್ಮ,
ಆಚೆ ಮನೆ ಶಾಂತಮ್ಮ,
ಗದ್ದೆಮನೆ ಸುಭದ್ರಮ್ಮ,
ಕಡೇ ಮನೆ ಲಕ್ಷ್ಮಮ್ಮ,
ಎಲ್ಲರಿಗೂ ಹೇಳಿ ಬಾರಾ,
ಮನಿಗೆ ಬರುಕಂತೆ ಬಳೆಗಾರ್ತಿ ಬಂದಳೆ ಅಂತ"
ಪದ್ದಮ್ಮ ಕೂಗಿ ಆರ್ಡರ್ ಹೊರಡಿಸಿದ್ರು ಮಾಣಿಗೆ..
ಮಾಣಿ... ಬಸ್ ಬಿಟ್ ಗಣುತ್ತಾ...ಹೋಗಿ ಸುದ್ದಿ ತಲುಪಿಸಿದಾ..
ಆಚೆ,ಈಚೆ ಮನೆ ಹೆಂಗಸರು 100 ಕಿಮೀ ಪಾಸ್ಟ್ ನಲ್ಲಿ ಪದ್ದಮ್ಮನ ಮನೆಗೆ ಬಂದು ಬಳೆಗಾರ್ತಿ ಸುತ್ತ ಕೂತಾಯ್ತು..
ನಂಗೆ ಇದು ಬೇಕು ಕಣೆ ನನ್ನ ಹತ್ರ ಈ ಬಣ್ಣವೇ ಇಲ್ಲ..ನಿನ್ನ ಹತ್ರ ಇದು ಅದೇಯಾ ಅಂತ ಮಾತಾಡುತ್ತಾ
ಬಳೆಗಳ ಆಯ್ಕೆ ಶುರು,ಆಯ್ಕೆ ಮುಗಿದ ನಂತರ,ಬಳೆಗಳ ಸೈಜ್,ಎಲ್ಲಾ ಬಳೆಗಾರ್ತಿಯಾ ಕಣ್ಣಳತೆಯಲ್ಲೇ ನಿರ್ದಾರ ಆಗೋದು..!
ಬಳೆ ತೊಡಿಸುವಾಗ ನೋವಾದರೆ ಗೊತ್ತಾಗಬಾರದು ಎನ್ನುವ ಕಾರಣಕ್ಕೋ ಏನೋ..
ತೊಡಿಸುವ ಸಮಯದಲ್ಲಿ ಹಾಡು ಕೂಡ ಸಾಮಾನ್ಯವಾಗಿತ್ತು..
ಬಳೆ ತೊಡಿಸೋದು ಬಹಳ ಕಷ್ಟ ಆದ್ರೆ ಬಚ್ಚಲ ಮನೆಯಿಂದ ಲಕ್ಸ್ ಸೋಪ್ ತಂದು ಕೈಗೆ ಹಚ್ಚೋದು ಅಷ್ಟೇ...
ಆಗ ಬಳೆ ಸೈಜ್ ಅಂದ್ರೆ ಕಣ್ಣ ಹತ್ರ ಹಿಡಿದು ಈ ಬಳೆ ಸೈಜ್ ನನ್ನ ಕೈಗೆ ಆಗುತ್ತೆ ಅಂತ ಕಾಣುತ್ತೆ ಅಂತ..
😂
ಅದೆಷ್ಟೇ ಬಂಗಾರದ ಬಳೆ ಗಳು,ಕಡಗಗಳು ಬೀರು ಒಳಗೆ ಇದ್ದರೂ .
ಈ ಗಾಜಿನ ಬಳೆಗಳು ಅಂದರೆ ಹೆಂಗಳೆಯರಿಗೆ ಅದೇನೋ ಪ್ರೀತಿ,
ಅದೇನೋ ಅವಿನಾಭಾವ ಸಂಬಂಧ,
ಅದೇನೋ ಸೆಳೆತ..
ಅದೇನೋ ಆಪ್ತತೆ...
ಅದೇನೋ ಸೇಂಟಿಮೆಂಟ್..
ಅದೇ ಹೆಣ್ಣಿಗೆ ಇನ್ನೂ ಹೆಚ್ಚಿನ ಮೆರುಗು ಕೊಡೋದೋ ಏನೋ ಅಲ್ವಾ?!
ಬೀರುವಿನಲ್ಲಿ ಎಷ್ಟು ಡಜನ್ ಬಣ್ಣ ಬಣ್ಣದ ತರಹೇವಾರಿ ಗಾಜಿನ ಬಳೆ ಇದ್ದರೂ,
ನಂಗೆ ಗಚ್ ನ ಬಳೆ ಬೇಕು,
ನನ್ನ ಹತ್ರ ಪ್ಲೇನ್ ಬಳೆ ಇಲ್ಲ,
ದಿನ ಹಾಕೋಕೆ ಎರಡು ಬಳೆ ತಗಣುಕು,
ಹಸಿರು ಬಳೆ ಎಲ್ಲಾ ಒಡೆದು ಹೋಗಿದ್ದಾವೆ,
ಒಂದು ಡಜನ್ ತಗಣುಕು,
ಹಳದಿ ಕಲರ್ ಸೀರೆ ತಗಂಡಿದಿನಿ ಮ್ಯಾಚ್ಹಿಂಗ್ ಬಳೆ ಇಲ್ಲ,
ಹೀಗೆ ಒಂದೊಂದು ಅತ್ಯಂತ ನಂಬಲು ಅರ್ಹವಲ್ಲದ ಹೆಳೆಯೊಂದಿಗೆ,
ಇನ್ನೂ ಬೇಕು ಮತ್ತೂ ಬೇಕು ಎನ್ನುವ ಆಸೆ..
ಬಳೆಗಳನ್ನು ಒಟ್ಟು ಹಾಕುವ,ಆಸೆ,ಧಾವಂತ..
ನಾನು ಇಷ್ಟು ಬಳೆಗಳ ಒಡತಿ ಎಂದು ಗರ್ವದಿಂದ ಹೇಳಿಕೊಳ್ಳೋ ಖುಷಿ...ಅಷ್ಟೇ...
❤️
ದೂರದಲ್ಲಿ ಕೂತು ಗಂಡು ಹುಡುಗರು ನಮಗೇನಾದ್ರು ಆಟದ ಸಾಮಾನು ಇದೆಯಾ ಅಂತ ಓರೆ ಗಣ್ಣಲ್ಲಿ ನೋಡುತ್ತಾ ಬೇಸರ ಪಟ್ಟು ಕೊಳ್ಳೋದಂತೂ ಪ್ರತಿ ವರ್ಷ ಕಟ್ಟಿಟ್ಟ ಬುತ್ತಿ ..
ಬಾಚಣಿಗೆ,ಸೇಫ್ಟಿ ಪಿನ್,ಒಂದಷ್ಟು ಸ್ಟಿಕ್ಕರ್,ಹೇರ್ ಕ್ಲಿಪ್,ಕನ್ನಡಿ,ಇನ್ನಿತರೆ ಬಿಟ್ಟರೆ..
ಹುಡುಗರಿಗೆ ಬೇಕಾಗಿದ್ದು ಏನೂ ಕಾಣಿಸಲ್ಲ..
ಅದು ಹುಡುಗರಿಗೆ ಒಂತರಾ ರಾಜಕೀಯ ಪಕ್ಷದ ಪ್ರಣಾಳಿಕೆಯಂತೆ..
ನೋಡೋಕೆ ಮಾತ್ರ,ಉಪಯೋಗ ಇಲ್ಲ..😂
ಇದರ ಮಧ್ಯೆ ನಮ್ಮ ಜೇಬಿಗೆ ಕತ್ತರಿ ಎಷ್ಟು ಬೀಳುತ್ತೋ ಅಂತ ಮನೆ ಯಜಮಾನ್ರು..
"ಇನ್ನು ಅಗಲ್ವೇನ್ರಾ ಬಳೆ ತಗೊಂಡು,ಬೇಗ ತಗಳಿ"
ಅಂತ ಟೆನ್ಷನ್ ನಲ್ಲಿ ಎಲೆ ಅಡಿಕೆ ಹರಿವಾಣ ಎಳಕಂಡು ಡಬ್ಬಿಲಿದ್ದ ಹೊಗೆ ಸೊಪ್ಪು ತೆಗದು ಸುಣ್ಣ ಹಾಕಿ ಕೈಯಲ್ಲಿ ತಿಕ್ತಾ ಪದ್ಮಾಸನದಲ್ಲಿ ಕೂತಿರೋದು ಬೇರೆ..😂
ಬಳೆಗಾರರು ಹಳ್ಳಿಯಲ್ಲಿ ಮಳೆಗಾಲದಲ್ಲಿ ಕೂಡ, ನಡೆದು ಕೊಂಡೇ,ತಲೆಯ ಮೇಲೆ ಬಳೆ ಗಂಟು ಇಟ್ಟು ಕೊಂಡು,
ಬಳೆ.... ಬೇಕಾ ಬಳೆ......
ಅಂತ ಕೂಗುತ್ತಾ,
ಮನೆ ಮನೆಗೆ ಹೋಗಿ,
ಶ್ರಾವಣದಲ್ಲಿ,ಗೌರಿ ಹಬ್ಬದಲ್ಲಿ,ಇನ್ನಿತರೆ ಹಬ್ಬಗಳಲ್ಲಿ ವ್ಯಾಪಾರ ಮಾಡೋದು ಸಾಮಾನ್ಯವಾಗಿತ್ತು...
ಪ್ರತಿ ವರ್ಷ ಭೇಟಿ ಕೊಡುವ ಮನೆಗೆ ಕಡ್ಡಾಯ ಪ್ರವೇಶ ಇದ್ದೇ ಇರುತ್ತೆ..!
ಅದನ್ನ ಬಳೆ ವ್ಯಾಪಾರ ಅನ್ನೋದಕ್ಕಿಂತ.....
ಸಂಸ್ಕೃತಿ,
ಸಂಪ್ರದಾಯ,
ಪದ್ದತಿ,
ಹಿಂದೂ ಧರ್ಮದ ಪ್ರತೀಕ,
ಹೆಂಗಳೆಯರು ಸಂಭ್ರಮ ಪಡಲು,ಖುಷಿ ಪಡಲು ಒದಗಿ ಬರುವ ಒಂದು ಸುಸಂಧರ್ಭ..
ಎನ್ನಬಹುದು...
ಅಲ್ವಾ❤️
ಬಳೆಗಳ ಮೇಲೆ ಸಾಕಷ್ಟು ಹಾಡುಗಳು ಬಂದಿರೋದು ಕೇಳಿದ್ದೇವೆ..
ಆದರೆ ಇತ್ತೀಚೆಗೆ ಮಾಡ್ರನೈಜೇಶನ್ ಭರಾಟೆಯಲ್ಲಿ, ಇಂತಹ ಪದ್ಧತಿಗಳು ಬಹಳ ಕಡಿಮೆ ಯಾಗುತ್ತಾ ಬಂದಿದೆ..
ಕೆಲವು ಕಡೆ ಹೀಗೆ ಹಳೆಯ ಪದ್ಧತಿಯಂತೆ ಬಳೆ ವ್ಯಾಪಾರ ಮಾಡೋರು ಈಗಲೂ ಇದ್ದಾರಂತೆ..!
ಆದರೆ ಇತ್ತಿಚೆಗೆ ಮನೆ ಮನೆಗೆ ಹೀಗೆ ಬರುವವರ ಸಂಖ್ಯೆ ವಿರಳವಾದಂತೆ ಕಾಣಿಸುತ್ತಾ ಇದೆ..!?
ಅಲ್ವಾ?
ಈ ವರ್ಷವಂತೂ ಕೋವಿಡ್ ಹತ್ತೊಂಬತ್ತು ಇಂತಹಾ
ಹಳೆಯ ಪದ್ಧತಿಗಳನ್ನ,ಸಂಪ್ರದಾಯಗಳನ್ನ,ಹಬ್ಬ ಹರಿದಿನಗಳನ್ನ,ಆಪೋಷಣ ತೆಗೆದು ಕೊಂಡು ಬಿಡ್ತು..
ಅನ್ನಬಹುದೇನೋ..
ನಾನು ಮೊನ್ನೆ ನನ್ನ ಸಂಬಂಧಿಕರ ಮನೆಗೆ ಹೋದಾಗ,
ಅಲ್ಲಿಗೆ ಪರಿಚಯಸ್ಥ
ಬಳೆಗಾರರು,ವರ್ಷ ವರ್ಷ ಬರುವವರು,ಗಂಡ ಹೆಂಡತಿ ಇಬ್ಬರು,
ಬಹಳ ಅರ್ಜೆಂಟ್ ನಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಬಂದು,
ಏನು ಬೇಕು ಅದನ್ನ ಕೂಡಲೇ ಅಲ್ಲೇ ಕೊಟ್ಟು,ವ್ಯಾಪಾರ ಮಾತ್ರ ಮಾಡಿ ಬಂದಷ್ಟೇ ವೇಗದಲ್ಲಿ ಹೊರಟೇ ಬಿಟ್ಟರು..!
ಅಲ್ಲಿ ಯಾವ ಆಚೆ ಮನೆ,ಈಚೆ ಮನೆಯ ಹೆಂಗಸರೂ ಬರಲಿಲ್ಲ..
ಬಳೆಗಾರ್ತಿ ಕೈಗೆ ಬಳೆ ತೊಡಿಸೋಕೆ ಅಂತ ಕೂತು ಒಂದಷ್ಟು ಸಮಯ ಕೂಡ ಮೀಸಲು ಇಡಲಿಲ್ಲ..
ಬಳೆ ತೊಡಿಸೋಕೆ ಯಾವ ಹಾಡು ಹೇಳಲಿಲ್ಲ..
ಈಗ ಕಾರಣ
ಕೋವಿಡ್ 19 ಇರಬಹುದು ಆದರೆ ಅದು ಒಂದೇ ಅಲ್ಲ...
ಇನ್ನೂ ಹತ್ತು ಹಲವು ಕಾರಣವಿದೆ..!.
ಯಾರಿಗೂ ಸಮಯವಿಲ್ಲ ಇಲ್ಲಿ..
ಹೋಗ್ತಾ ಹೋಗ್ತಾ ಕೆಲವು ವರ್ಷಕ್ಕೆ..
"ಬಳೆಗಾರ ಚನ್ನಯ್ಯ ಬಾಗಿಲಿಗೆ"ಬರೋದೇ ಅನುಮಾನ ಅನಿಸುತ್ತೆ..
😣
ಹೋದ ವರ್ಷ ಕೋವಿಡ್ 19 ಬಂದ ಸಮಯದಲ್ಲಿ
ಅನಿಸಿದ್ದು,ಕಂಡಿದ್ದು,ಬರೆದಿದ್ದು..
ಹಳೆಯದು..
😊
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ