ಬುಧವಾರ, ಜನವರಿ 22, 2020

ಮರದ ತುಂಡಲ್ಲ ಬುಕ್..

ಮರದ ತುಂಡು ಅಂದು ಕೊಂಡರಾ?
ಹಾಗಾದ್ರೆ ನಿಮ್ಮ ಕಣ್ಣು ನಿಮಗೆ ಮೋಸ ಮಾಡ್ತು..

1914ರಲ್ಲಿ Armaries collection curator,(ಶಸ್ತ್ರಾಸ್ತ್ರ ಶೇಖರಣಾ ಘಟಕದ ಮೇಲ್ವಿಚಾರಕರಾದ) Charles ffoulkes ಇದನ್ನ ಸಂಗ್ರಹಣೆ ಮಾಡಿ ಟವರ್ ಅಪ್ ಲಂಡನ್ ನ ಶಸ್ತ್ರಾಸ್ತ್ರ ಸಂಗ್ರಹಣಾ(Armaries Collection) ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದಾರಂತೆ..!

ಇದು 914 ಪುಟಗಳ ಲೆಡ್ಜರ್,ಇದರಲ್ಲಿ ಟವರ್ ಅಪ್ ಲಂಡನ್ Armarie ಯಲ್ಲಿ,ಬಂದೂಕು,ಮದ್ದು ಗುಂಡು,ಇನ್ನಿತರೆ ಯುದ್ಧ ಸಾಮಗ್ರಿ ಹಾಗೂ ಸ್ಪಾನಿಷ್ ಶಸ್ತ್ರಾಸ್ತ್ರ ಗಳ ಲೆಕ್ಕ ಪತ್ರ ಹಾಗೂ ರಶೀದಿಗಳನ್ನ ನಿರ್ವಹಣೆ ಮಾಡುತ್ತಾ ಇದ್ದರಂತೆ..

ಈ ಪುಸ್ತಕದಲ್ಲಿ 21 ಜೂನ್ 1675 ರಿಂದ 2 ಸೆಪ್ಟೆಂಬರ್ 1679 ವರೆಗಿನ ಲೆಕ್ಕ ಪತ್ರವಿದೆಯಂತೆ..!

ಇಷ್ಟು ದೊಡ್ಡ ಪುಸ್ತಕ ನೋಡಿ ನನಗೆ ಟೆನ್ಷನ್ ಆಗಿದ್ದಂತೂ ಸತ್ಯ..
ನೂರ್ ಮಾರ್ಕ್ಸ್ ಗೆ ಇಂತಹಾ ಒಂದು ಸಬ್ಜೆಕ್ಟ್ ಪುಸ್ತಕ ಕೊಟ್ಟರೆ ಗ್ಯಾರಂಟಿ ಚೀಟಿ ಮೇಲೆ ಏಳಲ್ಲ..
ಗ್ಯಾರಂಟಿ Govt seal 35 ಮಾರ್ಕ್ಸ್ ಕೂಡ ಬೀಳಲ್ಲ ಅಲ್ವಾ..
ಇದನ್ನ ಯಾರು ಎತ್ತುತ್ತಾ ಇದ್ರು ಅಂತ ಆ ದೇವರೇ ಬಲ್ಲ..
ನೋಡಿದ್ರೆ ಸುಸ್ತಾಗುತ್ತೆ ಇನ್ನು ಇದನ್ನ ಎತ್ತೋದಾ..
ಸಹವಾಸ ಅಲ್ಲ..
😂

ಸೋಮವಾರ, ಜನವರಿ 20, 2020

ಬ್ರಿಟಿಷರ ಕೈತೋಟದ ಮೇಲಿನ ಪ್ರೀತಿ..

ಸಾಮಾನ್ಯವಾಗಿ ಬ್ರಿಟೀಷರು ಮನೆಯ ಎದುರು,ವಿವಿಧ ಬಣ್ಣದ ಗುಲಾಬಿ,ಡೇರೆ ಹೂವು,ಸಣ್ಣ ಲಾನ್ ಹೀಗೆ ಬೇರೆ ಬೇರೆ ಹೂವುಗಳನ್ನ ಹಾಗೂ ತರಕಾರಿಗಳನ್ನ ಕೂಡ ಹೆಚ್ಚಿನವರು ಮನೆಯ ಎದುರು,compound wall ಹಾಗೂ ಹಿತ್ತಲಿನಲ್ಲಿ ಬೆಳೆದಿರುತ್ತಾರೆ,ಅವರಿಗೆ ಈ ಹೂವಿನ ಗಿಡ ಹಾಗೂ ಬಣ್ಣದ ತರತರದ ಗಿಡಗಳನ್ನ,ಸಣ್ಣ ಪುಟ್ಟ ತರಕಾರಿಗಳನ್ನ ಬೆಳೆಯೋ ಹವ್ಯಾಸ ಇರೋದು ಸಂತೋಷ ಅನಿಸ್ತು,

ವಿವಿಧ ಸಲಕರಣೆಗಳನ್ನ,ತಮ್ಮ ಮನೆಯಲ್ಲೇ ಸಣ್ಣ ಗೋಡೊನ್ ತರ ಮಾಡಿಕೊಂಡು,ಕಳೆ ಕೀಳುವ ಸಲಕರಣೆಗಳು,ಲಾನ್ ಕಟ್ ಮಾಡುವ ಮಷಿನ್,ಗಿಡ ಕತ್ತರಿಸುವ ಕತ್ತರಿ,ಸಲಿಕೆ,ಗುದ್ದಲಿ,ಸಣ್ಣ ಗಾಡಿ,ಕಾಡು ಮಣ್ಣು,ಗೊಬ್ಬರ ಮೂಟೆ,ಎಲ್ಲಾ ತರದ ಸಣ್ಣ ಪುಟ್ಟ ಕೆಲಸಕ್ಕೆ ಅನುಕೂಲ ಆಗುವ Equipment,ನೀರಿನ ವ್ಯವಸ್ಥೆ ಎಲ್ಲಾ ಮಾಡಿಕೊಂಡಿರ್ತಾರೆ..

ಅವರೇ ಕೈತೋಟದಲ್ಲಿ ಕೆಲಸ ಮಾಡ್ತಾರೆ...!

ಬೇರೆಯವರ ಮೇಲೆ ಸಣ್ಣ ಪುಟ್ಟ ವಿಷಯಕ್ಕೆ, ಅವಲಂಭಿತರಾಗೋದು ಬಹಳ ಕಡಿಮೆ ಅಲ್ಲದೇ ಕಾರ್ಮಿಕರು ಬಹಳ ದುಬಾರಿ ಹಾಗೂ ಅವರು ಸಿಗೋದು ಅಷ್ಟು ಸುಲಭವಲ್ಲ...!

ಅದಕ್ಕೆ ಸ್ವಾವಲಂಭಿಯಾಗಿ ತಮ್ಮ ಹತ್ತಿರ ಆಗುವಂತ ಕೆಲಸವನ್ನ ಅವರೇ ಮಾಡಿಕೊಳ್ಳುತ್ತಾರೆ..!

ಎಲ್ಲಾ ತರದ advanced ಸಲಕರಣೆ ಸಿಗುತ್ತೆ,ತಾವೇ ಹೋಗಿ ಬೇಕಿದ್ದನ್ನ ನೋಡಿ ತರಬಹುದು..!
ಬಹಳ ಅಚ್ಚುಕಟ್ಟಾಗಿ ಸುತ್ತಲೂ ಬೇಲಿ ಹಾಕಿ ನೋಡೋಕೆ ಚಂದವಾಗಿ ತಮ್ಮ ಕೈತೋಟವನ್ನ ಮಾಡಿರ್ತಾರೆ ಹೆಚ್ಚಿನವರು..

ಅದಕ್ಕಾಗಿ ಹಲವು ಗಂಟೆಗಳನ್ನ ಗಿಡವನ್ನು ಆಯ್ಕೆ ಮಾಡೋದಕ್ಕೆ,ಕೈತೋಟ ಮಾಡೋದಕ್ಕೆ,ವಾರದಲ್ಲಿ ಕೆಲವು ದಿನ ವ್ಯಯಿಸುತ್ತಾರೆ..!

ಹಾರ್ಡ್ ವೇರ್ ಅಂಗಡಿಗಳಿಗೆ ಹೋದರೆ ಅಲ್ಲಿ ಬಹಳ ದೊಡ್ಡ ಜಾಗದಲ್ಲಿ ವಿಧ ವಿಧ ಗಿಡಗಳನ್ನ,ಹಾಗೂ ಗೊಬ್ಬರ ಕೈತೋಟಕ್ಕೆ ಬೇಕಾಗುವ ಎಲ್ಲಾ ವಿಧದ ಹೊಸ ಹೊಸ ಆವಿಷ್ಕಾರದ ಸಲಕರಣೆ ಇಟ್ಟಿರ್ತಾರೆ,ಬಹಳ ದುಬಾರಿ ಕೂಡ ಇರಲ್ಲ..
ರಸ್ತೆ ಬದಿಗಳಲ್ಲಿ ಕೂಡ ಜಾಗವಿದ್ದ ಕಡೆ ಸಣ್ಣ,ಪುಟ್ಟ ಮರವನ್ನ ಕೌನ್ಸಿಲ್ ನವರು ಬೆಳೆಸಿ maintain ಮಾಡ್ತಾರೆ..
ಎಲ್ಲಾ ಮಾಲ್ ಗಳಲ್ಲಿ ವಿಧವಿಧವಾದ ಹೂವಿನ ಗಿಡದ ಹಾಗೂ ತರಕಾರಿಗಳ ಬೀಜ ಇಟ್ಟಿರ್ತಾರೆ..
ಒಂದು ಬೊಕ್ಕೆಯನ್ನ ಮಾಲ್ ನಿಂದ ತಂದರೂ ಅದರ ಜೊತೆ ಒಂದು ಸಣ್ಣ ಪ್ಯಾಕ್ supplement(ಗೊಬ್ಬರ) ಜೊತೆಗೆ ಕೊಟ್ಟಿರುತ್ತಾರೆ..

ಇಲ್ಲಿನ
ಹಲವು ವಿಧದ ಬಣ್ಣದ ಗುಲಾಬಿ ಮತ್ತೆ ಡೇರೆ ಹಾಗೂ ಇನ್ನಿತರೆ ಹೂವು ಹಾಗೂ ಗಿಡಗಳನ್ನ ನೋಡೋಕೆ ಚಂದ..😍

ನಾನು,ಇವರು ಚಳಿಗೆ ಫುಲ್ ಕವರ್ ಆಗಿ ಓಡಾಡೋದು ಮಾತ್ರ ಅಂದು ಕೊಂಡಿದ್ದೆ..
ಆದರೆ
ಇವರ ಹೂವಿನ ಗಿಡಗಳ ಹಾಗೂ ಗಿಡಮರಗಳ ಮೇಲಿನ ಪ್ರೀತಿ ಒಂತರಾ ನಮಗೂ ಉತ್ಸಾಹ,ಆಸಕ್ತಿ ಹಾಗೂ ಖುಷಿ ಕೊಡುತ್ತೆ..
😍

ಬ್ರಿಟನ್ ಸಾರ್ವತ್ರಿಕ ಚುನಾವಣೆ

ಬ್ರಿಟನ್ ಸಾರ್ವತ್ರಿಕ ಚುನಾವಣೆ 12-12-2019:-

ಚುನಾವಣಾ ಕಚೇರಿಯಿಂದ ನನಗೆ ಒಂದು ಲೆಟರ್ ಬರುತ್ತೆ..
ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಮತ ಚಲಾವಣಾ ಸಮಯ..
ಇದು ಪೊಲಿಂಗ್ ಬೂತ್ ವಿಳಾಸ
(ಒಂದು ಶಾಲೆಯ ವಿಳಾಸ..)
ಹಾಗೂ ಹೆಸರು ಮನೆಯ ವಿಳಾಸ..ಅಷ್ಟು ಅದರಲ್ಲಿ ಇರುತ್ತೆ..
ಇದನ್ನ ಮತದಾನದ ಸಮಯದಲ್ಲಿ ತರುವ ಅಗತ್ಯವಿಲ್ಲ ಅಂತಲೂ ನಮೂದಿಸಿರುತ್ತಾರೆ..!

ನಾನು ಸಂಜೆ 3 ಡಿಗ್ರಿ ಚಳಿಯಲ್ಲಿ ಒಂದು ಮತ ಚಲಾವಣೆ ಮಾಡೇ ಬಿಡೋಣ ಅಂತ ಶಾಲೆಯ ವಿಳಾಸ ಹುಡುಕುತ್ತಾ ಹೊರಟೆ,ಶಾಲೆಯ ಸುತ್ತಾ ಸುತ್ತಿದ್ರೂ ಚುನಾವಣೆಯ ವಾಸನೆಯೇ ಇಲ್ಲ,ನಡೆಯುತ್ತಿದೆ ಅನ್ನೋದಕ್ಕೆ ಸಣ್ಣ ಕುರುಹು ಇಲ್ಲ..!

ಬೆಂಚ್,ಟೇಬಲ್,ಚೇರ್ ಹಾಕಿಕೊಂಡು,ತಮ್ಮ ಪಕ್ಷದ ಚಿಹ್ನೆ ಹಿಡಿದು ಪುರುಸೊತ್ತಲ್ಲಿ ನಗುತ್ತಾ ನಿಂತ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲ!,

ಮತದಾರರ ಪಟ್ಟಿಯ ಹೆಸರು ನೋಡಿ ಬರೆದು ಕೊಡೋಕೆ ಜನ ಇಲ್ಲ!

ಹ್ವಾಯ್,ಈ ಸರಿ ಒಂದು ಸರಿ ನಮ್ಮ ಕಡೆ ನೋಡಿ..ಅಣ್ಣನ್ನ ಮರಿ ಬೇಡಿ,ಅಕ್ಕನ ಮರಿ ಬೇಡಿ,ಗೊತ್ತಲ್ಲ ಇದಕ್ಕೆ ಈ ಸರಿ.. ಅಂತ ಹೇಳೋ ಒಬ್ಬರೂ ಇಲ್ಲ..!😂

ಪೋಲಿಂಗ್ ಕ್ಷೇತ್ರ,ಇಷ್ಟು ದೂರ ಗುಂಪುಕಟ್ಟುವ ಹಾಗಿಲ್ಲ ಅಂತ ಬೋರ್ಡ್ ಹಾಕಿ,ಬಾವುಟ ಹಾಕಿಲ್ಲ,ಚುನಾವಣೆಗೆ ನಿಂತವರ ಹೆಸರು ಲಿಸ್ಟ್ ಎಲ್ಲೂ ಇಲ್ಲ..!

ಚುನಾವಣಾ ಆಯೋಗದ ಯಾವ ನೋಟಿಸ್ ಇಲ್ಲ..!

ಪೊಲೀಸರ ಸುಳಿವು ಇಲ್ಲ,ಜನ ಜಂಗುಳಿ ಇಲ್ಲ..!

ನಂದಿನ್ನೂ ಓಟ್ ಆಗ್ಲ ಮಾರಾಯ್ರೆ ಅಂತ ಆಗಾಗ ಪಕ್ಷಗಳ ಮುಖಂಡರ ಮುಖ ನೋಡೋರು ಇಲ್ಲ..!

ಲೋಕಲ್ ಎಣ್ಣೆ,ರಾಣಿ ವಿಸ್ಕಿ,ಮಂತ್ರಿ ವಿಸ್ಕಿ ಹಾಕಿಕೊಂಡು ಹರಿದಾಡುತ್ತಾ ಇರುವ ಯಾವುದೇ,ಸರ್ಪಿನ ಹಾವು,ಕೆರೆ ಹಾವು,ಹೆಬ್ಬಾವು ಇನ್ನು ಯಾವುದೇ ಹಾವುಗಳು ಇಲ್ಲ,ಅವುಗಳ ವಾಸನೆ ಇಲ್ಲ ಅವುಗಳ ಗಲಾಟೆ ಇಲ್ಲ..!
ಒಂದು ಕಿರಿಕ್ ಇಲ್ಲ,ಗಲಾಟೆ ಇಲ್ಲ..
ಸೂ... ಮಗ,ಬೋ.. ಮಗ..ನೋಡಕಿತಿನಿ ನಿನ್ನ,ಸಿಗು ನೀನು ಅನ್ನೋ ಆವಾಜ್ ಇಲ್ಲ..
EVM ಸರಿ ಇಲ್ಲ ಅನ್ನೋಕೆ EVM ಇಲ್ಲ..
ಮೋದಿಗೆ ಬೈಯೋಣ ಅಂದರೆ ಮೋದಿ ಇಲ್ಲಿಲ್ಲ..!

ಇಂತಹ ಅದ್ಬುತ ಸುಳಿವು ಏನೂ ಇಲ್ಲದೆ
ಸುಮಾರು ಹೊತ್ತು ಹುಡುಕಾಡಿದ ಮೇಲೆ...

ಕೊನೆಗೂ ಶಾಲೆಯ ಒಂದು ಬದಿಯಲ್ಲಿ ಸಣ್ಣದಾಗಿ ಪೋಲಿಂಗ್ ಅಂತ ಬರೆದಿತ್ತು ಸಣ್ಣ arrow mark ಕೂಡ ಇತ್ತು..ಅದನ್ನ ಅನುಸರಿಸಿ ಒಂದು ಹಾಲ್
ಒಳಗೆ ಹೋದರೆ ಆಯಾ ಪಕ್ಷದ ಬೂತ್ ಏಜೆ0ಟ್ ಒಬ್ಬರೂ ಇಲ್ಲ..!
ಸರತಿ ಸಾಲಿನಲ್ಲಿ ಜನರೂ ಇಲ್ಲ..!

ಕೇವಲ ಮೂರು ಜನ ಅಧಿಕಾರಿಗಳು ಜ್ಯಾಕೇಟ್ ಹಾಕಿಕೊಂಡು,ಹೀಟರ್ ಹಾಕಿಕೊಂಡು ಸುಮ್ಮನೆ ಕೂತಿದ್ದಾರೆ..

ಎಡಕ್ಕೆ
ಒಂದು ಸಣ್ಣ ರಟ್ಟಿನ ಬಾಕ್ಸ್ನ ಟೇಬಲ್ ಮೇಲೆ ಇಡಲಾಗಿತ್ತು ಅದು ಮತ ಚಲಾವಣೆಯ ಜಾಗ..

ಅದರಲ್ಲಿ ಒಂದು ಪೆನ್ಸಿಲ್ ಇಡಲಾಗಿತ್ತು..

ಹೋದ ಕೂಡಲೇ ಎದುರಲ್ಲಿ ಒಂದು ಸಣ್ಣ ಟೇಬಲ್ ಇತ್ತು, ಅಲ್ಲಿ
ಮೊದಲು ಕೂತ ಅಧಿಕಾರಿಗೆ,ಹಲೋ..... ಅಂತ ಹೇಳಿ ಏರಿಯಾ ಪಿನ್ ಹೇಳಿದರೆ ಆಯ್ತು,ಹಲೋ,ಆರ್ ಯು ಓಕೆ..ಹೇಗಿದ್ದೀರಾ ಅಂತ ಕಿರುನಗೆ ಚೆಲ್ಲಿ,ಲಿಸ್ಟ್ ನಲ್ಲಿ ಇರುವ ಹೆಸರು ನೋಡಿ,ಮನೆಯ ವಿಳಾಸ ಹೇಳ್ತಾರೆ,ಹೆಸರು ಹೇಳಿ,ನೀವೇನಾ ಕೇಳ್ತಾರೆ..
ಹೌದು ಅಂದರೆ ಆಯ್ತು..!

ಯಾವ ಗುರುತಿನ ಚೀಟಿ ಏನೂ ಕೇಳುವ ಪ್ರಶ್ನೆಯೇ ಇಲ್ಲ..!

ಆಮೇಲೆ ಪಕ್ಕದಲ್ಲಿ ಕೂತ ಅಧಿಕಾರಿ
ಒಂದು ಪೇಪರ್ ಕೊಡ್ತಾರೆ,ಅದು ಚುನಾವಣೆಗೆ ನಿಂತ ಉಮೇದುವಾರರ ಪಟ್ಟಿ...!

ಅದನ್ನ ಹಿಡಿದು ರಟ್ಟಿನ ಬಾಕ್ಸ್ ಬಳಿ ಹೋಗಿ ಪೆನ್ಸಿಲ್ ನಲ್ಲಿ ಯಾವ ಪಕ್ಷದ ವ್ಯಕ್ತಿಗೆ ಮತ ಹಾಕಬೇಕೋ ಅದರ ಎದುರು X ಮಾರ್ಕ್ ಮಾಡಿ ಅದನ್ನ ಮಡಚಿ ಪಕ್ಕದಲ್ಲೇ ಇರುವ ಒಂದು ಕಪ್ಪು ಬಾಕ್ಸ್ ಒಳಗೆ ಹಾಕಿದರೆ ಆಯ್ತು..
ಬೆರಳಿಗೆ ಇಂಕು ಅದೆಲ್ಲಾ ಕತೆಯೇ ಇಲ್ಲ..!😊

ನಿಮ್ಮ ಮತ ಚಲಾವಣೆ ಪ್ರಕ್ರಿಯೆ ಮುಗಿಯಿತು..

ಧನ್ಯವಾದಗಳು,ಶುಭರಾತ್ರಿ ಅಂತ ಹೇಳಿ,ನಗುತ್ತಾ ಸಂತೋಷದಿಂದ ಬೀಳ್ಕೊಡುತ್ತಾರೆ ಅಲ್ಲಿನ ಮೂರು ಮತ್ತೊಂದು ಅಲ್ಲಲ್ಲ ಎರಡು ಮತ್ತೊಂದು.. ಸಿಬ್ಬಂದಿ...😍
ಅಷ್ಟೇ
ಇದು
ಇಂಗ್ಲೆಂಡ್ಗೆ ಇಂದು ನಡೆದ ಸಂಸತ್ ಗೆ ನಡೆಯುವ ಚುನಾವಣೆಯ ರೀತಿ...

ಹಾಗೆ ಅಲ್ಲೊಂದು ಸಣ್ಣ ಸೂಚನೆ ಫಲಕ ಕೂಡ ಇತ್ತು..

"ಎಷ್ಟು ಪರ್ಸ0ಟ್ ಮತದಾನ ಆಗಿದೆ ಅಂತ ಕೇಳಬೇಡಿ ಅಂತ!"ಅದು ನನಗೆ ಆಶ್ಚರ್ಯ ಅನಿಸ್ತು..!

ಕೊನೆಗೆ....
ಯಾರೋ ದಕ್ಷಿಣ ಅಮೆರಿಕಾದವರ ತರ ಕಾಣುತ್ತಾ ಇದ್ದ ಚುನಾವಣಾ ಮಹಿಳಾ ಅಧಿಕಾರಿ ನನ್ನ ಹತ್ತಿರ ಹಲವು ವಿಷಯ ಮಾತನಾಡಿದರು,ನೀವು ಭಾರತೀಯರ ಕೇಳಿದ್ರು..ನಾನು ನಮ್ಮ ದೇಶದಲ್ಲಿ ಚುನಾವಣೆ ಹೀಗೆ ನಡೆಯಲ್ಲ ಅಂದೆ..ಅದಕ್ಕೆಅವರು ಇದು ಬ್ರಿಟನ್ ವಿಶ್ವಸಂಸ್ಥೆ ಕೆಲವು ನಿಭಂದನೆ ಮಾಡಿದೆ,ಅದನ್ನ ನಾವು ಚುನಾವಣೆಯಲ್ಲೂ ಪಾಲೋ ಮಾಡಬೇಕು,ಈಗ EU ಅವರು ಇಲ್ಲಿ ಮತದಾನ ಮಾಡುವ ಹಾಗಿಲ್ಲ,ಹಾಗೆ ಇನ್ನೂ ಕೆಲವು ಬದಲಾವಣೆ ಆಗುವ ಚಾನ್ಸ್ ಇದೆ ಅಂತ ಉಭಯ ಕುಶಲೋಪರಿ ಮಾತಾಡಿ ಬಾಯ್,ಗುಡ್ ನೈಟ್ ಅಂತ ಹೇಳಿ ಕಳುಹಿಸಿದ್ರು..😍

ಇಷ್ಟೇನಾ ಪ್ರಾಕ್ಸಿ ಹೊಡೆಯಬಹುದಲ್ಲ ಅಂತ ಕೇಳಬಹುದು ನೀವು...!

ಸಿಕ್ಕಿ ಹಾಕಿಕೊಂಡರೆ ಮಿನಿಮಮ್ 6 ತಿಂಗಳು ಜೈಲು ಅಷ್ಟೇ..
ಮುದ್ದೆ ಸೊಪ್ಪಿನ ಹುಳಿ ಕೊಡಲ್ಲ,
ಬ್ರೆಡ್ ಬಟರ್ ಕೊಡ್ತಾರೆ..ಅಷ್ಟೇ ವ್ಯತ್ಯಾಸ😂

ಈಗ
ನಮ್ಮ ದೇಶದ
ಚುನಾವಣೆಯ ಬಗ್ಗೆ ಒಮ್ಮೆ ಊಹಿಸಿ ಕೊಳ್ಳಿ..!
😁

ಬ್ರಿಟಿಷರು ಎಂತಾ ಸುಖ ಇಲ್ಲ..
ಖರ್ಚೆ ಮಾಡಲ್ಲ..
ಚಪ್ಪೆ...

ಇದು ಎಂತಾ ಚುನಾವಣೆ...
ಹೋಗ್ರಾ
ಥೋ...
😂

ನಮ್ಮದೇಶದ ಇಂಜಿನಿಯರ್ ಹಾಗೂ ಲಂಡನ್ ಟವರ್ ಬ್ರಿಡ್ಜ್

30 ಜೂನ್ 1886 ರಿಂದ 21 ಜೂನ್ 1894 ರವರೆಗೆ ಸುಮಾರು 8 ವರ್ಷಗಳ ಕಾಲ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಲಾದ
801 ಅಡಿ(244m) ಉದ್ದ
213ಅಡಿ(65m)ಎತ್ತರ
270ಅಡಿ(82m)ಅತಿ ಅಗಲದ ಸ್ಪಾನ್
28ಅಡಿ(8.6m) ಎತ್ತರ (when Bascule Closed)
139ಅಡಿ (42m)ಎತ್ತರ(When Bascule opend)
ಹೊಂದಿರುವ
ಈ ಲಂಡನ್ ಟವರ್ ಸೇತುವೆಗೆ
(Techincal name:-Bascule Bridge/Suspension Bridge)
Horance Jones,
George D Stevenson ಎಂಬುವವರು ಮುಖ್ಯ Architiect ಆಗಿದ್ದರಂತೆ..
ಈ ಸೇತುವೆಯ ವಿನ್ಯಾಸಗಾರರು ಮತ್ತೆ ತಾಂತ್ರಿಕವರ್ಗ,(Architects ಮತ್ತೆ Engineers) ಹೆಚ್ಚಿನವರು ಬ್ರಿಟಿಷರೇ ಇದ್ದರು..

ಆದರೆ ಅದರಲ್ಲಿ ಬ್ರಿಟಿಷ್ ಅಲ್ಲದ Engineer,ನಮ್ಮ ಭಾರತೀಯರು ಕೂಡ ಈ ಸೇತುವೆಯ ಸಂಪೂರ್ಣ ಕಾಮಗಾರಿ ಮುಗಿಯುವವರೆಗೆ ಅಲ್ಲಿಯೇ ಕೆಲಸ ನಿರ್ವಹಿಸಿದ್ದರು ಅನ್ನುವ ಮಾಹಿತಿ ನೋಡಿ
ಹೆಮ್ಮೆ ಮತ್ತೆ
ಖುಷಿ ಅನಿಸಿತು..❤️

ಅವರ ಹೆಸರು ಕೇಶವ್ಜಿ ಶ್ಯಾಮ್ ಜಿ ಬುದ್ಬಟ್ಟಿ
ಇವರು ಗುಜರಾತ್ ಮೂಲದವರು,ಲಂಡನ್ ನಲ್ಲೇ ವಿದ್ಯಾಭ್ಯಾಸ ಮಾಡಿದ್ದರಂತೆ..😍

ಡೇವಿಡ್ ಹ್ಯುಮ್ ಮತ್ತು ಕಾಲುಜ್ಜುವುದು..

ಇದು ಡೇವಿಡ್ ಹ್ಯುಮ್ ಎನ್ನುವ ಒಬ್ಬ ಇತಿಹಾಸಕಾರ,ತತ್ವಜ್ಞಾನಿಯ ಪ್ರತಿಮೆ..
ಇವರು 1711 ರಿಂದ 1776 ರವರೆಗೆ ಎಡಿನ ಬರೋ ದಲ್ಲಿ ಜೀವಿಸಿದ್ದರಂತೆ ಇವರ ಕಂಚಿನ ಪ್ರತಿಮೆಯನ್ನ 1995ರಲ್ಲಿ Alexender stoddart ಎನ್ನುವ ಕಲಾಕಾರರು ಮಾಡಿದ್ದಾರೆ, Edinburgh, Royal mile ನಲ್ಲಿ ರುವ ಹೈ ಕೋರ್ಟ್ ಎದುರು ಇದನ್ನ ಸ್ಥಾಪಿಸಲಾಗಿದೆ..

ಈ ಪ್ರತಿಮೆಯ ಬಲಗಾಲಿನ ಹೆಬ್ಬೆರಳು ಉಜ್ಜಿದರೆ ಒಳ್ಳೆಯ ಯೋಗ ಬರುತ್ತೆ ಅಂತ ಜನರ ನಂಬಿಕೆ..

ಇಲ್ಲಿಗೆ ಬರುವ ಪ್ರವಾಸಿಗರು ಆ ಬೆರಳು ಉಜ್ಜಿ ಉಜ್ಜಿ,ಅದು ಬಂಗಾರದ ಬಣ್ಣಕ್ಕೆ ಬದಲಾಗಿದೆ..

ನಂಬಿಕೆ ಮೂಢ ನಂಬಿಕೆ,ಎಲ್ಲಾ ಅವರವರ ಭಾವಕ್ಕೆ ಬಿಟ್ಟಿದ್ದು..

ಆದರೆ
ಒಂದು ವಿಶೇಷ ಅಂದರೆ ಈ ರೀತಿಯ ನಂಬಿಕೆಗೆ ಇಲ್ಲಿ ಯಾರೂ ಅಪಹಾಸ್ಯ ಮಾಡಿದ್ದು ಕಂಡಿಲ್ಲ..
ಕೇಳಿದರೆ..
ಅವರವರ ಇಷ್ಟ,ಅವರವರ ನಂಬಿಕೆ ಅಂತಾರೆ ಇಲ್ಲಿಯ ಜನ..

ಬೇರೆಯವರಿಗೆ ಹದ ಹಾಕುವವರು,ಬೋಧನೆ ಮಾಡುವವರು,ಅಪಹಾಸ್ಯ ಮಾಡೋರು,ನಾವೇನೋ ಬಹಳ ಮುಂದುವರೆದಿದ್ದೀವಿ ಅಂತ ತೋರಿಸುವ ಧಾವಂತ,ಇಲ್ಲಿ ಬಹಳ ಕಡಿಮೆ..!
😂

ಕೊಹಿನೂರ್ ವಜ್ರದ ಮನೆ

ಇದು ಟವರ್ ಆಪ್ ಲಂಡನ್ ನಲ್ಲಿ ಇರುವ The Crown Jewel ಅಂತ ಒಂದು ಕಟ್ಟಡ,

ಇಲ್ಲೇ ಕೋಹಿನೂರ್ ವಜ್ರದ Replica ಇಟ್ಟಿದ್ದಾರೆ ಹಾಗೆ ನಮ್ಮ ದೇಶದ ಹೆಸರೂ ಹಾಕಿದ್ದಾರೆ..!

ಇಲ್ಲಿ ಒಳಗಡೆ ಇಟ್ಟಿರುವ ಚಿನ್ನದ ಕಿರೀಟಗಳು ಅದಕ್ಕೆ ವಜ್ರದ ವರ್ಕ್ ಮಾಡಿರೋದು,ತಟ್ಟೆಗಳು,ಚಮಚ,ಲೋಟ,ನೀರಿನ ಮಗ್,ಖಡ್ಗಗಳು,momentoಗಳು,ಬೇರೆ ಬೇರೆ ಕೆತ್ತನೆಗಳು,ಚಿತ್ರ ವಿಚಿತ್ರ ಆಕೃತಿಗಳು,ಇನ್ನೂ ದೊಡ್ಡ ಸಾಮಗ್ರಿ ನೋಡೋಕೆ,ಸುಮಾರು ಹೊತ್ತು ಬೇಕು ಅಷ್ಟು ಬಂಗಾರದ ಆಭರಣ ಹಾಗೂ ಪಾತ್ರೆಗಳನ್ನ ಜೋಡಿಸಿ ಇಟ್ಟಿದ್ದಾರೆ..!!!

ಯಾವುದೇ ಕಾರಣಕ್ಕೂ ಫೋಟೋಗ್ರಾಫಿ ಮಾಡುವ ಹಾಗಿಲ್ಲ,

ಮುಖ್ಯ ದ್ವಾರದ ಎದುರು ಒಂದು ಸಣ್ಣ ಸೂಚನಾ ಫಲಕದಲ್ಲಿ No cigarate,No alcohol,No photography,No video graphyಅಂತ ಮಾತ್ರ ಹಾಕಿದ್ದಾರೆ..ಅಷ್ಟೇ

ಬೋರ್ಡ ಮಾತ್ರ ಇದೆ..
ಅಲ್ಲಿರುವ ಗಾರ್ಡ್ ಗಳು ಅದೆಲ್ಲಾ ಹೇಳೋದು ಇಲ್ಲ,

ಆದರೆ ಒಬ್ಬರೂ ಫೋಟೋ ತೆಗೆಯೋದು ಇಲ್ಲ,ವೀಡಿಯೊ ಕೂಡ ಮಾಡಲ್ಲ..!

ಹಾಗಾಗಿ ನಾನು ಜೇಬಿನಿಂದ ಮೊಬೈಲ್ ತೆಗೆಯಲಿಲ್ಲ,ಬ್ಯಾಗ್ ನಿಂದ ಕ್ಯಾಮರಾ ತೆಗೆಯಲಿಲ್ಲ..!
ಯಾಕೆ ಬೇಕು

"ಯುಕೆಯಲ್ಲಿ ಕನ್ನಡಿಗ ಧರ್ಮದ ಏಟು ತಿಂದ ಯಾಕೆ!?

ಕೋಹಿನೂರ್ ವಜ್ರಕ್ಕೆ ಕೈ ಹಾಕಲು ಹೋಗಿಯಾ!!??

ಕೆಲವೇ ಕ್ಷಣದಲ್ಲಿ ಬ್ರೇಕಿಂಗ್ ನ್ಯೂಸ್ ನಮ್ಮಲ್ಲೇ ಮೊದಲು"
ಅಂತ ಅವನಾಮ ಥೋ ಅವಮಾನ ಮಾಡಿಸಿಕೊಳ್ಳೋದು ಅಲ್ವಾ..😂

ಆದರೆ ನಮ್ಮ ದೇಶದ ಆಭರಣಗಳ ಬಗ್ಗೆ ಆಸಕ್ತಿ ಇರುವ ಮಹಿಳೆಯರು ಬಂದರೆ ಖಂಡಿತಾ ಆ ಜಾಗದಿಂದ ಅರ್ಧ ದಿನ ಹೊರಗೆ ಬರಲ್ಲ ಅಷ್ಟು ಡಿಸೈನ್ ಹಾಗೂ ತರ ತರದ ವಜ್ರ,ಹವಳ,ಮುತ್ತು,ಹಾಗೂ ಇನ್ನಿತರೆ ದುಬಾರಿ ವಸ್ತು ಬಳಸಿ ಆಭರಣಗಳು ಕಿರೀಟಗಳ ಡಿಸೈನ್ ಮಾಡಲಾಗಿದೆ,ಖಡ್ಗಗಳನ್ನ,ಪಿಸ್ತೂಲ್ ಗಳಲ್ಲಿ ಕೂಡ ವಜ್ರ ಬಳಸಿದ್ದನ್ನ ಇಡಲಾಗಿದೆ..!

ಮದುವೆ ಮನೆಯಲ್ಲಿ ಅನ್ನ ಸಾಂಬಾರು ಮಾಡಲು ಬಳಸುವ ಒಂದು ದೊಡ್ಡ ಕಡಾಯದ ತರದ ಬಂಗಾರದ  ಪಾತ್ರೆ ನೋಡಿ ಹೊಟ್ಟೆ (ಉರಿದು)ತುಂಬಿ ಹೋಯ್ತು..😣

ಮನೆಯಲ್ಲಿ ಇದ್ದರೆ ಚಿನ್ನ
ಚಿಂತೆ ಏತಕೆ ಇನ್ನಾ ಅನ್ನೋಣ ಅಂತ ಅಂದು ಕೊಂಡೆ..
ಆದರೆ ಆ ಚಿನ್ನ
ನಮ್ಮ ಲಂಡನ್ ನ ಎಲಿಜಬೆತ್ ಅಜ್ಜಿದು...!

ಅಲ್ಲಿರುವ ಸೆಕ್ಯೂರಿಟಿ ಹುಡುಗಿಯರನ್ನ ನೋಡಿದ್ರೆ ಭಯ ಆಗುತ್ತೆ..
ಸಹವಾಸ ಅಲ್ಲ ಅಲ್ವಾ..
ಜೀವ ಇದ್ರೆ ಜೋನಿ ಬೆಲ್ಲ ತಿಂದು ಆದ್ರೂ ಬದುಕಬಹುದು..
ಅಲ್ವಾ!!!
😂

ಬ್ರಿಟನ್ ಟವರ್ ಆಪ್ ಲಂಡನ್ ಕಾಗೆಗಳು

The Ravens.
If the ravens leave the tower
The Kingdom will fall..
ಎನ್ನುವ ಒಂದು ನಂಬಿಕೆ ಬ್ರಿಟಿಷ್ ರಾಜಮನೆತನದಲ್ಲಿ ಬಹಳ ಹಿಂದಿನಿಂದ ಇದೆ..

ಸುಮಾರು 6 ಕಾಗೆಗಳನ್ನ ಈ ಟವರ್ ಅಪ್ ಲಂಡನ್ ನ ದಕ್ಷಿಣ ಭಾಗದ ಲಾನ್ ನಲ್ಲಿ ಸಾಕಿಕೊಂಡಿದ್ದಾರೆ..

ಈ ಕಾಗೆಗಳು ಟವರ್ ಆಪ್ ಲಂಡನ್ ಜಾಗ ಬಿಟ್ಟು ಬೇರೆಡೆ ಹೊರಟು ಹೋದರೆ,ಟವರ್ ಅಪ್ ಲಂಡನ್ ಕುಸಿದು ಬೀಳುತ್ತೆ,ರಾಜ ಮನೆತನಕ್ಕೆ ಸಮಸ್ಯೆ ಆಗುತ್ತೆ ಹಾಗೂ ಅವರ ಅಧಿಪತ್ಯ ಮುಗಿದು ಬಿಡತ್ತೆ,ಇಂಗ್ಲೆಂಡ್ ದೇಶ ಕತೆ ಮುಗಿಯುತ್ತೆ ಎನ್ನುವ ನಂಬಿಕೆಯಂತೆ..!

ಈ ಕಾಗೆಗಳು ಕಿರೀಟ ಮತ್ತು ಲಂಡನ್ ಟವರ್ ಕಾವಲು ಮಾಡುತ್ತವೆ ಎನ್ನುವ ನಂಬಿಕೆಯಂತೆ..!...

ಈ ಕಾಗೆಗಳನ್ನ ನೋಡಿಕೊಳ್ಳಲು ಒಬ್ಬರು Raven master ಕೂಡ ನೇಮಕ ಮಾಡಿದ್ದಾರೆ,
Jubilee, Harris,Gripp,Rocky,Erin,Poppy,and Merlina(ಒಂದು extra ಸಾಕಲಾಗಿದೆ)
ಅಂತ ಹೆಸರಿನ 7 ಕಾಗೆಗಳನ್ನ ಸಾಕಲಾಗಿದೆ.
ಇತ್ತೀಚೆಗೆ ಮರಿಗಳು ಕೂಡ ಹುಟ್ಟಿವೆಯಂತೆ!

ಇದರಲ್ಲಿ ಕೆಲವು ಕಾಗೆಗಳು ವಿಶೇಷ ಕೌಶಲ್ಯ ಕೂಡ ಹೊಂದಿದ್ದಾವೆ ಅಂತೆ,
ಅವುಗಳು ಮಿಮಿಕ್ ಮಾಡೋದು,ಆಟ ಆಡೋದು,ಕೆಲವು ಸಮಸ್ಯೆ ಪರಿಹಾರ ಮಾಡೋದು ಎಲ್ಲಾ ಮಾಡುವ ಸಾಮರ್ಥ್ಯ ಕೂಡ ಹೊಂದಿವೆಯಂತೆ..!!!

ಪ್ರವಾಸಿಗರು ಕೆಲವೊಮ್ಮೆ ಈ ಅನುಭವ ಪಡೆದದ್ದೂ ಇದೆಯಂತೆ ಆದರೆ ಯಾವುದೇ ಆಹಾರ ಹಾಕಬೇಡಿ,ಜಾಸ್ತಿ ಅವುಗಳ ಜೊತೆ interaction ಮಾಡಬೇಡಿ ಒಮ್ಮೊಮ್ಮೆ ಅವು ಸಿಟ್ಟಾಗಿ ದಾಳಿ ಮಾಡುವ ಸಾಧ್ಯತೆ ಇದೆ ಅಂತಲೂ ಅಲ್ಲಿನ ಸಿಬ್ಬಂದಿ ಹೇಳ್ತಾರೆ..!
ಇವುಗಳು ಮಾಸ್ಟರ್ ಮಾತನ್ನ ಚಾಚೂ ತಪ್ಪದೆ ಪಾಲಿಸುತ್ತವಂತೆ!😊

ನನಗೆ ಒಂದೆರಡು ಕಾಗೆಗಳು ಅಲ್ಲೇ ಅಕ್ಕಪಕ್ಕ ಕೂಗುತ್ತಾ ಓಡಾಡೋದು ಕಾಣಿಸಿತು,ಬೆಳಕಿನ ಅಭಾವದಿಂದ ಫೋಟೋ ತೆಗೆಯಲು ಆಗಲಿಲ್ಲ..!😣

ಇವಕ್ಕೆ ದಿನಕ್ಕೆ ಎರಡು ಹೊತ್ತು,RavenMaster,
ಆಹಾರ,ಅಂದರೆ ಇಲಿ,ಹಾಗೂ ಮಾಂಸದ ಚೂರು ಹಾಗೂ ರಕ್ತದಲ್ಲಿ ಅದ್ದಿರುವ ಬಿಸ್ಕೆಟ್ ಹಾಕುತ್ತಾರಂತೆ..

ಇವು ಜಾಸ್ತಿ ದೂರ ಹಾರಿ ಹೋಗದಂತೆ ಆಗಾಗ ಮಾಸ್ಟರ್ ರೆಕ್ಕೆಗಳನ್ನ ಕೆಲವು ಭಾಗ ಟ್ರಿಮ್ ಮಾಡುತ್ತಾರಂತೆ..

ಆದರೆ ಅವು ಹೊರ ಹೋಗೋದು ಬಹಳ ಕಡಿಮೆ ಅಂತೆ..

ಕೆಲವೊಮ್ಮೆ ಗ್ರೀನ್ವಿಚ್ ಹೋದ ಘಟನೆಯು ನಡೆದಿತ್ತು ಎನ್ನಲಾಗಿದೆ..!

ನಂಬಿಕೆಯೋ..ಮೂಢನಂಬಿಕೆಯೋ..
ಅವರವರ ಭಾವಕ್ಕೆ..!
ಪ್ರಪಂಚದ ಯಾವ ಜನರನ್ನೂ ಹೊರತಾಗಿ ಇಲ್ಲ ಅನ್ನೋದಕ್ಕೆ ಇದು ಒಂದು ಉದಾಹರಣೆ ಎನ್ನಬಹುದು...!
ಅಲ್ವಾ!?...

ಈಗಲೂ ಇದನ್ನ ಬಲವಾಗಿ ನಂಬಿ ನಡೆಸಿಕೊಂಡು ಬರುತ್ತಾ ಇದ್ದಾರೆ British Royal familyಯವರು..!

(ವಿ.ಸೂ:-ಇದನ್ನ ಬಹಳ ಸಂಕ್ಷಿಪ್ತವಾಗಿ ಬರೆದಿದ್ದೇನೆ,ಇದರ ಹಿನ್ನೆಲೆ ಸಂಪೂರ್ಣ ಮಾಹಿತಿ ಹಾಕಿಲ್ಲ,ಇದರ ಕತೆ ಬಹಳ ದೊಡ್ಡದಿದೆ ಆಸಕ್ತರು ಇದರ ಇತಿಹಾಸ ಓದಿದರೆ ಹೆಚ್ಚಿನ ಮಾಹಿತಿ ಸಿಗಬಹುದು!!)

ಬಾಬಿ ಎಂಬ ಎಡಿನ್ ಬರೋ ನಾಯಿಯ ಕತೆ

ನಾಯಿ ನಿಯತ್ತಿಗೆ ಹೆಸರಾದ ಪ್ರಾಣಿ,ಒಮ್ಮೆ ಒಬ್ಬರನ್ನ ಹಚ್ಚಿಕೊಂಡರೆ ಅವರನ್ನ ಬಿಟ್ಟು ಹೋಗುವ ಮಾತೇ ಇಲ್ಲ..😍

ಇದು Scotland ನ Edinbarugh ಎಂಬ ಪಟ್ಟಣದಲ್ಲಿ 19ನೆ ಶತಮಾನದಲ್ಲಿ ನಡೆದ ಒಂದು ನೈಜ ಕತೆ...

ಸುಮಾರು 1855 ರ ಸಮಯದಲ್ಲಿ,ಎಡಿನ್ ಬರೋ ಎಂಬ ಪಟ್ಟಣದಲ್ಲಿ,ಎಡಿನ್ ಬರೋ ಪೊಲೀಸ್ ಇಲಾಖೆಯಲ್ಲಿ ಜಾನ್ ಗ್ರೇ ಎಂಬವ್ಯಕ್ತಿ ನೈಟ್ ವಾಚ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತ ಇದ್ದರಂತೆ..

ತುಂಬಾ ಚಳಿಗಾಲದಲ್ಲಿ ಒಬ್ಬರೇ ಕಾವಲು ಕಾಯುವಾಗ ಒಬ್ಬರು ಜೊತೆಗಾರ ಇರಲಿ ಅಂತ
Skye Terrier ಎಂಬ ಬ್ರೀಡ್ ನ ಬಾಬಿ ಎಂಬ ಹೆಸರಿನ 2ವರ್ಷ ವಯಸ್ಸಿನ ನಾಯಿ ಸಾಕಿದ್ದರಂತೆ,ಸ್ವಲ್ಪ ದಿನಕ್ಕೆ ಬಹಳ ಆಪ್ತ ಸ್ನೇಹಿತರಾಗಿ ಬಿಡ್ತಾರೆ ಇಬ್ಬರೂ,

ಇದರ ಮಧ್ಯೆ
ಜಾನ್ ಗ್ರೇ ಗೆ Tubercolosis ಸಮಸ್ಯೆ ಪ್ರಾರಂಭವಾಗತ್ತೇ,ಅದು ದಿನೇ ದಿನೇ ಬಹಳ ಉಲ್ಬಣವಾಗಿ,15 ಫೆಬ್ರವರಿ,
1858ರಲ್ಲಿ ಜಾನ್ ಗ್ರೇ ಮರಣ ಹೊಂದಿ ಬಿಡ್ತಾರೆ,

ಅವರನ್ನ ಅಲ್ಲೇ ಹತ್ತಿರದ Old town Edinbarugh,Greyfriers kirik yard ಎಂಬ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಮಾಡುತ್ತಾರೆ..

ಆದರೆ ತನ್ನ ಒಡೆಯನ ಅಂತಿಮ ಸಂಸ್ಕಾರ ಆದ ದಿನದಿಂದ ಎಷ್ಟೇ ಕೆಟ್ಟ ವಾತಾವರಣ,ಚಳಿ ಇದ್ದರೂ ಒಡೆಯನ ಸಮಾಧಿ  ಬಳಿ ಕುಳಿತು,ಓಡಾಡುತ್ತಾ ಜೀವನ ಮಾಡುತ್ತಾ ಇರುತ್ತೆ ಬಾಬಿ,ಇದನ್ನ ಗಮನಿಸಿದ ಅಲ್ಲಿನ ಸ್ಥಳೀಯರು ಬಾಬಿಯನ್ನ ಬೇರೆಡೆ ಸ್ಥಳಾಂತರ ಮಾಡಲು ಹಲವು ಸರಿ ಪ್ರಯತ್ನ ಮಾಡಿದರೂ,ಮತ್ತೆ ಅಲ್ಲೇ ಬಂದು ವಾಸ ಮಾಡುತ್ತಾ ಇತ್ತಂತೆ..!

ಕೊನೆಗೆ ಬಾಬಿ ಸ್ಥಲಾಂತರ ಮಾಡೋದು ಪ್ರಯತ್ನ ಕೈಬಿಟ್ಟ ಜನ..
ಗ್ರೇಪ್ರೈಯರ್ ಕಿರಿಕ್ ಯಾರ್ಡ್ನ, ಜಾನ್ ಗ್ರೇ ಸಮಾಧಿಯ ಪಕ್ಕದಲ್ಲೇ ಬಾಬಿಗೆ ಒಂದು ಸಣ್ಣ ಗೂಡನ್ನು ಕಟ್ಟಿ ಕೊಟ್ಟರಂತೆ..

ಬಾಬಿಯ ಈ ಸುದ್ದಿ ಕೆಲವೇ ದಿನಗಳನ್ನ ಇಡೀ ಎಡಿನ್ ಬರೋ ಪಟ್ಟಣಕ್ಕೆ ಮುಟ್ಟುತ್ತೆ..!

ಸುಮಾರು ಒಂದು ಗಂಟೆಯ ಮಧ್ಯಾನ್ಹ ಜನರೆಲ್ಲಾ ಕಿರಿಕ್ ಯಾರ್ಡ್ ಬಳಿ ಬಂದು ಬಾಬಿಯನ್ನ ನೋಡುತ್ತಾ ಇದ್ದರಂತೆ,ಕಾರಣ ದಿನಾ ಒಂದು ಗಂಟೆಗೆ ಬಂದೂಕು ಶಬ್ದ ಮಾಡೋದು ಅಲ್ಲಿನ ವಾಡಿಕೆ,ಆ ಬಂದೂಕು ಶಬ್ದ ಕೇಳಿದ ಕೂಡಲೇ,ಬಾಬಿ ಓಡಿ ಹೋಗಿ ಅಲ್ಲೇ ಹತ್ತಿರದಲ್ಲಿ ಇದ್ದ ಟ್ರೈಲ್ಸ್ ಕಾಪಿ ಹೌಸ್ ನಲ್ಲಿ ಮಧ್ಯಾನ್ಹದ ಊಟ ಮುಗಿಸಿ ಬರುತ್ತಾ ಇತ್ತಂತೆ,ಸ್ಕ್ಯಾಟ್ ಎಂಬುವ ಒಬ್ಬರು ಸೈನಿಕ ಈ ರೀತಿ ಬಾಬಿಗೆ ತರಭೇತಿ ಮಾಡಿದ್ದರು ಎನ್ನಲಾಗಿದೆ,ಸಂಜೆಯೂ 6 ಗಂಟೆಗೆ ಊಟ ಮುಗಿಸಿ ವಾಪಾಸಾಗುತ್ತಿತ್ತಂತೆ ಬಾಬಿ..!

ಕೆಲವು ಸಮಯದ ನಂತರ ಅಲ್ಲಿನ ಆಡಳಿತ ಮಂಡಳಿವತಿಯಿಂದ
1867 ರಲ್ಲಿ ಒಂದು ಹೊಸ ಕಾನೂನು ಮಾಡಲಾಗುತ್ತದೆ,ಎಲ್ಲಾ ನಾಯಿಗಳಿಗೆ ಲೈಸೆನ್ಸ್ ಟ್ಯಾಗ್ ಇರಲೇ ಬೇಕು,ಲೈಸೆನ್ಸ್ ಇಲ್ಲವಾದರೆ ಅದನ್ನ ಸಾಯಿಸಲಾಗುವುದು ಅಂತ!?

ಇದನ್ನ ಗಮನಿಸಿದ Scotish society for prevention cruelty to animal ನ ನಿರ್ದೇಶಕರು William chamber ಎನ್ನುವವರು ನಾಯಿಯ ಲೈಸೆನ್ಸ್ ಗೆ,ಸಂಬಂದ ಪಟ್ಟ ಇಲಾಖೆಗೆ ಹಣ ಕೊಟ್ಟು,ಟ್ಯಾಗ್ ಮಾಡಿಸಿ ಕಾಲರ್ ತಂದು ಕೊರಳಿಗೆ ಹಾಕಿದ್ದರಂತೆ,

ಆ ಕೊರಳ ಲೈಸೆನ್ಸ್ ಪಟ್ಟಿ ಈಗಲೂ ಎಡಿನ್ ಬರೋ ಮ್ಯೂಸಿಯಂ ನಲ್ಲಿ ಇಡಲಾಗಿದೆ,

14ಜನವರಿ 1872 ರಂದು ಬಾಬಿ ಕೊನೆಉಸಿರು ಎಳೆದು ಬಿಡುತ್ತೆ ಆಗ ಅದಕ್ಕೆ 16 ವರ್ಷ ವಯಸ್ಸು...
ಬಾಬಿಯನ್ನ ಕೂಡ ಅದೇ ಸ್ಮಶಾನದ ಬಳಿ,ಅದರ ಒಡೆಯನ ಸಮಾಧಿ ಹತ್ತಿರವೇ ಹೂಳಲಾಗಿದೆ!

ಎಡಿನ್ ಬರೋದಾ ಜನತೆ ಈ ಬಾಬಿಯ ಮೇಲೆ ಬಹಳ ಪ್ರೀತಿ ತೋರಿಸಿ 14 ವರ್ಷ ನೋಡಿದರೂ,ಬಾಬಿ ತನ್ನ ಯಜಮಾನನ ಮೇಲಿನ ಪ್ರೀತಿ ತನ್ನ ಕೊನೆ ಉಸಿರು ಇರುವವರೆಗೆ ಸ್ವಲ್ಪವೂ ಕಡಿಮೆ ಮಾಡಲಿಲ್ಲ,ಆ ಜಾಗವನ್ನ ಬಿಡಲೇ ಇಲ್ಲ ಅನ್ನೋದು ಬಹಳ,ಆಶ್ಚರ್ಯ,ವಿಶೇಷ ಹಾಗೂ ಖುಷಿ ಪಡುವ ಸಂಗತಿ..

ಅದರ ನೆನಪಿಗಾಗಿ  Philanthropist (ಪರೋಪಕಾರಿ,ಸಮಾಜ ಸೇವಕಿ ಅನ್ನಬಹುದು!)Lady burdett-coutt ಎನ್ನುವವರು ಇದರಿಂದ ಪ್ರೇರೇಪಿತರಾಗಿ  ಕಾರಂಜಿಯೊಂದಿಗೆ ಇರುವ ಬಾಬಿ ಪ್ರತಿಮೆಯನ್ನ george 4 bridge ಮತ್ತು candle maker row junction ನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಮಂಡಳಿಯ ಪರ್ಮಿಶನ್ ತೆಗೆದು ಕೊಂಡು ಸ್ಥಾಪಿಸಿದರು..
ಇದರ ಹೆಸರಿನ ಒಂದು ಬಾರ್ ಮತ್ತು ರೆಸ್ಟೋರೆಂಟ್ ಕೂಡ ಅಲ್ಲೇ ಮಾಡಲಾಗಿದೆ..

ಬಾಬಿಯ ಮೇಲೆ ಹಲವು ಕತೆಗಳು,ಲೇಖನಗಳು,ಚಲನಚಿತ್ರಗಳು ಆಗಿವೆ,
Novel-greyfriars Bobby by Eleanor atkinson(1912)

Film-Greyfriar Bobby(1961),Adventure of Greyfriars Bobby(2006) ಆಗಿವೆ..

ಇದರ ಮೂಗನ್ನು ಉಜ್ಜಿದರೆ ಲಕ್ ಬರುತ್ತೆ ಎನ್ನುವ ಒಂದು ನಂಬಿಕೆಯೂ ಇಲ್ಲಿದೆ..!

ಪ್ರವಾಸಿಗರು,ಬಾಬಿಯ ಪ್ರತಿಮೆಯ ಮೂಗು ಉಜ್ಜಿ ಉಜ್ಜಿ ಬಂಗಾರದ ಬಣ್ಣ ಮಾಡಿಟ್ಟಿದ್ದಾರೆ..!
😊

Ve gang,chikn story(London dairy)

ಒಂದಿನ ಸಿಕ್ಕಾಪಟ್ಟೆ ತಿರುಗಾಡಿ ಸುಸ್ತಾಗಿತ್ತು,ಹಸಿವು ಬೇರೆ..

ಸುತ್ತ ಮುತ್ತ ಯಾವ ರೆಸ್ಟೋರೆಂಟ್ ಕಾಣಿಸ್ತಾ ಇಲ್ಲ,

ಗೂಗಲ್ ಸರ್ಚ್ ಮಾಡಿದ್ರೆ ಬರೀ..
Subway,Burger king,Costa,M&S, nero cafe,pret,gregg,Star buck,expresso,ಪಿಟ್ಜಾ ಹಟ್,MC,Dixcy,ಇಂತಹುಗಳೇ ಕಾಣಿಸ್ತಾ ಇವೆ..!😢

ಕೊನೆಗೆ ಅಲ್ಲೆಲ್ಲೋ Borough ಮಾರ್ಕೆಟ್ ಒಳಗಡೆ
Ve Gang,plant based food ಅಂತ ಕಾಣಿಸ್ತು..

ನೋಡೋಣ ಅಂತ ಮಾರ್ಕೆಟ್ ಬಾಗಿಲ ಒಳಗಡೆ ಹೋಗಿ ಹುಡುಕಿ ನೋಡಿದ್ರೆ..

ತುಂಬಾ ಚಿಕ್ಕದಾದ ಒಂದು ಸಣ್ಣ ಗೂಡು ಅಂಗಡಿ ತರಹದ ಅಂಗಡಿ,ಸಕತ್ ಚನ್ನಾಗಿ ಇಟ್ಟಿದ್ದರು,
ಒಬ್ಬಳೇ ಹುಡುಗಿ ಚಪಾತಿ ಏನೋ ಲಟ್ಟಿಸುತ್ತಾ ಇದ್ದಳು..
ಹತ್ತಿರ ಹೋದ ತಕ್ಷಣ..

You all rite!?
ಅಂತ ನಗೆ ಬೀರಿದಳು..

ಏನಿದೆ!?
ಸಂಪೂರ್ಣ ಸಸ್ಯಾಹಾರವಾ"ಅಂತ ಕೇಳಿದೆ

"ಹೌದು"
ಅಂತ ಮೆನು ಕೊಟ್ಟಳು..

ನಾನು ಮೆನು ಎಲ್ಲಾ ನೋಡಿ.

"ಹಲಸಿನ ಹಣ್ಣಿನದ್ದು  ರಾಫ್ (Jack fruit wrap)ಆರ್ಡರ್ ಓಕೆ,ಇನ್ನೊಂದು ನಿಮ್ಮಲ್ಲಿ ಯಾವುದು ಫೇಮಸ್ ಅದು ಕೊಡಿ"
ಅಂತ ಹೇಳಿ ಅಲ್ಲೇ ಇದ್ದ ಲಾಂಜ್ ನಲ್ಲಿನ ಸಾರ್ವಜನಿಕ ಟೇಬಲ್ ಮೇಲೆ ಕೂತೆ,

ಸ್ವಲ್ಪ ಹೊತ್ತಿನ ನಂತರ
"ತಗೊಳ್ಳಿ ನಿಮ್ಮ ಹಲಸಿನ ಹಣ್ಣಿನ ರಾಫ್ ಹಾಗೂ ಚಿಕನ್ ರಾಫ್ enjoy your food"
ಅಂತ ಕೈಗೆ ಕೊಟ್ಟೆ ಬಿಟ್ಟಳು,

ಒಂದು ಸರಿ ಶಾಕ್ ನಾನು,ಅಲ್ಲ ಸಸ್ಯಾಹಾರ(Vegan) ಅಂತ ಹೇಳಿ ಚಿಕನ್ ತಿನ್ನುವ ಹಾಗೆ ಮಾಡ್ತಾ ಇದ್ದಳಲ್ಲ ಈ ಬ್ರಿಟಿಶ್ತಿ..😡

ಅಂತ ಎದ್ದು ಹೋಗಿ,

"ನಾನು ಕೇಳಿದ್ದು ಸಂಪೂರ್ಣ ಸಸ್ಯಾಹಾರ ಅಲ್ವಾ ಅಂದೆ!?"

ಅದಕ್ಕೆ ಅವಳು
"ಇದು ಸಸ್ಯಾಹಾರವೇ (Vegan only)"
ಅಂದಳು ನನಗೆ confuse ಆಯ್ತು,

"ಅಲ್ಲ ಮತ್ತೇನೋ ಚಿಕನ್ ರಾಫ್(chicken wrap) ಅಂದ್ರಲ್ಲ"
ಅಂದೆ,ಗಾಬರಿಯಿಂದ...!

ಅದಕ್ಕೆ ಅವಳು

"ನಾವು ಸಂಪೂರ್ಣ ಸಸ್ಯ ಜನ್ಯ ಆಹಾರ ಮಾತ್ರ ಉಪಯೋಗ ಮಾಡೋದು ನಮ್ಮ ಶಾಪ್ ನಲ್ಲಿ,
ಡೈರಿ ಪ್ರಾಡಕ್ಟ್ ಕೂಡ ಉಪಯೋಗಿಸಲ್ಲ"
ಅಂದಳು,

"ನಾನು ಓಹ್ ಹೌದಾ..ಧನ್ಯವಾದಗಳು,ಚಿಕನ್ ಅಂದ್ರಲ್ಲ ಗಾಬರಿ ಆಯ್ತು"
ಅಂತ ನಕ್ಕು ಬಿಟ್ಟೆ,

"ಹಾಗೆಲ್ಲಾ ನಂಬಿಕೆ ದ್ರೋಹ ಖಂಡಿತಾ ಮಾಡಲ್ಲ,ಅನುಮಾನ ಬೇಡ ಅದಕ್ಕೆ ಹೆಸರು ಹಾಗೆ ಇಟ್ಟಿದ್ದೇವೆ ಅಷ್ಟೇ! ನಿಮ್ಮ ಆಹಾರವನ್ನ ನೆಮ್ಮದಿಯಿಂದ ತಿನ್ನಿ ಅದು ಸಂಪೂರ್ಣ ಸಸ್ಯಾಹಾರ"
ಅಂತ ನಕ್ಕಳು,

ನಾನು ಕಣ್ಣು ಕಣ್ಣು ಬಿಡ್ತಾ ಬಂದು ಅಲ್ಲೇ ಚೇರ್ ಮೇಲೆ ಕೂತು ಚಿಕನ್ ರಾಫ್ ತಿಂದೇ,ಚನ್ನಾಗಿತ್ತು....!
ಆದರೆ ನಮ್ಮ ಹಲಸಿನ ಹಣ್ಣಿನ ರಾಫ್ ನಷ್ಟು ರುಚಿ ಅನಿಸಿಲ್ಲ..😍❤️

ಆಮೇಲೆ ಮೆನು ಸರಿಯಾಗಿ ಗಮನಿಸಿದರೆ ಅದು

Chicken wrap ಅಲ್ಲ

Chik'n wrap😂

ಒಂದು ಸಣ್ಣ ಸ್ಪೆಲ್ಲಿಂಗ್ ಬದಲಾವಣೆ ಮಾಡಿ ಬ್ರಿಟನ್ ಅಜ್ಜಿ ಕಡೆಯವರು ನನಗೆ ಮಂಗ ಮಾಡೋದಾ ಮಾರಾಯ್ರೆ..
ಥೋ..
😂

ಆದರೆ ve-gang👌