ಶುಕ್ರವಾರ, ನವೆಂಬರ್ 15, 2019

GMT ಗ್ರೀನ್ ವಿಚ್ ಸಮಯ

ಅದೇನೋ ಸೊನ್ನೆ ಡಿಗ್ರಿ ಜಾಗ,ಜಗತ್ತಲ್ಲಿ ಸಮಯ ಶುರುವಾಗೋದೇ ಇಲ್ಲಿಂದ,ಅಕ್ಷಾ0ಶ ರೇಖಾಂಶ,ಇಂಗ್ಲೆಂಡ್ನಲ್ಲಿ ಗ್ರೀನ್ವಿಚ್ ಅಂತ ಪ್ರದೇಶ ಇದೆ ಅಲ್ಲಿ ಆ ರೇಖೆ ಹಾದು ಹೋಗುತ್ತೆ,ಉತ್ತರ ದೃವದಿಂದ,ದಕ್ಷಿಣ ದೃವಕ್ಕೆ ಹಾದು ಹೋಗುವ ರೇಖೆ ಇಲ್ಲಿ ಸರಿಯಾಗಿ ಸೊನ್ನೆ ಡಿಗ್ರಿ ಬರುತ್ತೆ,ಉತ್ತರಕ್ಕೆ 90 ಡಿಗ್ರಿ ಅಂತೆಲ್ಲಾ ಶಾಲೆಯಲ್ಲಿ ಮಾಸ್ಟ್ರು ಹೇಳಿಕೊಟ್ಟಿದ್ರಲ್ಲ,ಆಗ ಅರ್ಥ ಆಗದೇ ಇದ್ರು,ಯಾವ ದೃವನೋ,ಯಾವ ರೇಖಾನೋ ಅಂತ ಮಾಸ್ಟ್ರು ಮುಖ ನೋಡಿ,ಓಹ್..ಎಲ್ಲಾ ಅರ್ಥ ಆಯ್ತಪ್ಪ ಅಂತ ಸುಮ್ನೆ ಓವರ್ ಆಕ್ಟಿಂಗ್ ಮಾಡ್ತಾ ಇದ್ವಲ್ಲ,ಅದೇನೋ  ಅದನ್ನ ನೋಡೋಣ ಅಂತ London ನಿಂದ DLR ರೈಲಿ ನಲ್ಲಿ ಹೊರಟು ಕೂತರೆ,ನಮ್ಮ ಜೀವ ಡ್ರೈವರ್ ಕೈಯಲ್ಲಿ ಕೊಟ್ಟಿದ್ದೇವೆ ಅಂತ ಹೇಳೋ ಹಾಗೆ ಇಲ್ಲ,ಯಾಕೆ ಅಂದರೆ DLR(ಡಾಕ್ ಲ್ಯಾಂಡ್ ಲೈಟ್ ರೈಲ್)ಅಂದ್ರೆ ಸ್ವಯಂ ಚಾಲಿತ ರೈಲು,ನಮ್ಮ ಜೀವ ನಮ್ಮ ಕೈಯಲ್ಲೇ ಇರಬೇಕು😂,

ಅಲ್ಲಿಂದ ಒಂದು ಅರ್ಧ ಗಂಟೆ ಪ್ರಯಾಣದ ನಂತರ ಕಟಿ ಸಾರ್ಕ್ ಅಂತ ಒಂದು ರೈಲು ನಿಲ್ದಾಣದಲ್ಲಿ ರೈಲು ನಿಲ್ತು..
ಅಲ್ಲಿ ನಮ್ಮ ಕೈಯಲ್ಲೇ ಇದ್ದ ಜೀವ ನಾವೇ ಹಿಡಿದು ಕೊಂಡು ಇಳಿದು,
ನಿಲ್ದಾಣದಿಂದ ಹೊರಬಂದು,ನಮ್ಮ ಗೂಗಲ್ಲೇಶ್ವರನ ಸಹಾಯ ಪಡೆದು ಸೊನ್ನೆ ಡಿಗ್ರಿ ಜಾಗ ಹುಡುಕುತ್ತಾ ಹೊರಟೆವು,ಸುಮಾರು 15 ನಿಮಿಷ ಕಾಲ್ ಕಂಠೇಶ್ವರ ಬಸ್ 😂ನಿಧಾನದ ಪ್ರಯಾಣದ ನಂತರ(ಕಾಲ್ನಡಿಗೆ),
ದೊಡ್ಡದಾದ ಪಾರ್ಕ್ ಹಾಗೂ ಗುಡ್ಡದ ಮೇಲಿರುವ ಆ ಜಾಗಕ್ಕೆ ತಲುಪುವಾಗ ಅರ್ಧ ಜೀವ ಹೋಗಿತ್ತು,ಅದೇ ಗ್ರೀನ್ ವಿಚ್,ಜಗತ್ತಿನ ಸಮಯ ಶುರುವಾಗುವ ಸ್ಥಳ,ಕೊನೆಗೆ ನೋಡಿದರೆ ಅಲ್ಲಿ ಒಂದು ಜಾಗದಲ್ಲಿ ಸೊನ್ನೆ ಡಿಗ್ರಿ ಗೆರೆಯ ಜಾಗಕ್ಕೆ ಜನ ಮುಗಿ ಬಿದ್ದಿದ್ದರು ನಾವು ಅವರ ಹಿಂದೆ ನಿಂತು,ಒಂದಷ್ಟು ಫೋಟೋ ಎಲ್ಲಾ ತೆಗೆದು ತಿರುಗಿ ನೋಡಿದರೆ,ಇದು ನಿಜವಾದ ಸ್ಥಳವಲ್ಲ,ಉಚಿತವಾಗಿ ಫೋಟೋ ತೆಗೆದು ಕೊಳ್ಳಲು ಇಟ್ಟಿರೋದು ಅಷ್ಟೇ..ನಿಜವಾದ ರೇಖೆ ಪ್ರಾರಂಭವಾಗುವ ಸ್ಥಳಕ್ಕೆ compound ಹಾಕಿ ಗಟ್ಟಿಯಾಗಿ ಇಟ್ಟಿದ್ದಾರೆ,ಆದರೆ ಒಳಗಡೆ ಜನರಿದ್ದಾರೆ..ಒಂದು ಸುತ್ತು ಪಾರ್ಕ್ ಎಲ್ಲಾ ಹೊಡೆದು ನೋಡಿದರೂ,ಎಲ್ಲೂ ಗೇಟ್ ಒಳ ಹೋಗಲು..ಇಲ್ಲ,ಆಗ ಜ್ಞಾನೋದಯ ಆಯ್ತು..
ಓಹ್...ಇವರು ಧರ್ಮ ದರ್ಶನ ಮಾಡಿಸಲ್ಲ ಅಂತ..ಕೊನೆಗೆ ಹುಡುಕುತ್ತಾ ಹೋದಾಗ ಅಲ್ಲಿದ್ದ ಸಿಬ್ಬಂದಿ ಹೇಳಿದ್ರು..
ಇಲ್ಲಿ ಟಿಕೆಟ್ ತಗೊಳ್ಳಿ ಸಾ...ಅಂತ(ಆಂಗ್ಲ ಭಾಷೆಯಲ್ಲಿ😂).
ಒಳ ಹೋಗಿ ಕೇಳಿದರೆ
ಒಂದು ತಲೆಗೆ £16 Pound 🙄
ಅಷ್ಟು ಹಣವನ್ನ ಪಾವತಿಸಿ,ಅಲ್ಲಿ ticket counter ನಲ್ಲಿ ಇದ್ದ ಹುಡುಗಿಯ ಹುಸಿನಗೆ ಯ ಜೊತೆ,welcome to the Royal observatory greenwich..
ಅಂತ ಹೇಳಿಸಿ ಕೊಂಡು ಒಳ ನಡೆದೆವು,ಹಾಗೆ ಅಲ್ಲಿ ಕೊಟ್ಟ audio ಗೈಡ್ ತಗೊಂಡು,ಒಂದೊಂದೇ ವಿಷಯವನ್ನ ಕೇಳುತ್ತಾ ಹೋದಾಗ ಅನಿಸಿದ್ದು..
ಅಲ್ಲ,ಇವರೆಲ್ಲಾ ಕಂಡು ಹಿಡಿದದ್ದು ಕಷ್ಟ ಪಟ್ಟಿದ್ದು ನೋಡೋಕೆ ಹಣ ಕೊಡೋಕೆ ಅರ್ಥ ಮಾಡಿಕೊಳ್ಳೋಕೆ ಇಷ್ಟು ಯೋಚನೆ ಮಾಡ್ತೀವಿ ಕಷ್ಟ ಪಡ್ತೀವಿ..ಇನ್ನು ಇವರು ಎಷ್ಟು ಕಷ್ಟಪಟ್ಟಿರಬಹುದು ಗಡಿಯಾರ ಕಂಡು ಹಿಡಿಯೋಕೆ,ಅಕ್ಷಾಅಂಶ, ರೇಖಾಂಶ ಎಲ್ಲಾ ಗುರುತಿಸೋಕೆ,ಸಮುದ್ರದ ದಿಕ್ಕು ಎಲ್ಲಾ ಗುರುತಿಸೋಕೆ..ಅಂತ..
ನಿಜಕ್ಕೂ ಅದ್ಭುತ ವಿವರಣೆ ಇತ್ತು..
ಜಗತ್ತಿನಲ್ಲಿ ಮೊದಲು ಸಮಯ ಕಂಡು ಹಿಡಿಯಲು ಬಳಸುತ್ತಾ ಇದ್ದ ವಿಧಾನ,ಗಡಿಯಾರಗಳ Development,ಎಲ್ಲವೂ ಅದ್ಬುತ ಅನಿಸ್ತು..ಹಾಗೆ ಜಗತ್ತಿನ ನಾನಾ ದೇಶಗಳ ಸಮಯ,ಎಷ್ಟೆಷ್ಟು ಡಿಗ್ರಿಯಲ್ಲಿ ಯಾವ ಯಾವ ದೇಶದ ಯಾವ ಸ್ಥಳ ಬರುತ್ತೆ,ಎಲ್ಲವನ್ನೂ ವಿವರಿಸಲಾಗಿದೆ ಈ ಗ್ಯಾಲರಿ ಒಳಗೆ..
ಇದರ ಬಗ್ಗೆ ತುಂಬಾ ಆಸಕ್ತಿ ಇರೋರಿಗೆ ಒಂದು ದಿನ ಸಾಕಾಗಲ್ಲ ಇಲ್ಲಿ..ಅಷ್ಟು ವಿಷಯಗಳು ಇವೆ..
ಗ್ರೀನ್ವಿಚ್ ಅನ್ನುವ ಜಾಗದಿಂದಲೇ
ಸಮಯ ಶುರುವಾಗೋದು..
ಗ್ರೀನ್ ವಿಚ್ ನಿಂದ ಲಂಡನ್ ಗೆ ಸುಮಾರು ಒಂದು ಗಂಟೆ Difference ಇದೆ..
ಗ್ರೀನ್ವಿಚ್ ನಿಂದ ನಮ್ಮ ದೇಶಕ್ಕೆ 5.30 ಗಂಟೆ
ಸೊನ್ನೆ ಡಿಗ್ರಿ ರೇಖಾಂಶ ದಿಂದ ಮುಂಬೈ 72 ಡಿಗ್ರಿ ಪೂರ್ವಕ್ಕೆ ಇದೆ..
"0" ಡಿಗ್ರಿ ರೇಖಾಂಶ ದಿಂದ ಬೆಂಗಳೂರು 75 ರಿಂದ 76 ಡಿಗ್ರಿ ಪೂರ್ವಕ್ಕೆ ಇದೆ..
ಇಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ವಿಷಯ,ಒಂದು ಗ್ಲೋಬ್ ನಲ್ಲಿ 0 ಡಿಗ್ರಿ ಯಿಂದ ಬೇರೆ ಬೇರೆ ಡಿಗ್ರಿಯಲ್ಲಿ ಹಾದು ಹೋಗುವ ರೇಖೆಗಳಲ್ಲಿ 75 ಡಿಗ್ರಿ ಹೋಗುವ ರೇಖೆಯ ಹತ್ತಿರ,ಸಿಗುವ ಊರಿನ ಹೆಸರಿನಲ್ಲಿ ನಮ್ಮ ಬೆಂಗಳೂರು ಹಾಗೂ ಮೈಸೂರು ಕಂಡದ್ದು..😍
ಇಲ್ಲಿ ಹತ್ತು ಹಲವು ಗಡಿಯಾರಗಳನ್ನ ಇಡಲಾಗಿದೆ,ಯಾವ ಯಾವ ರೀತಿ ಸಮಯ ನೋಡೋಕೆ,ಹಡಗಿನಲ್ಲಿ ದಿಕ್ಕು ನೋಡೋಕೆ ಆಗಿನ ಟೆಕ್ನಾಳಜಿ ಬಳಸುತ್ತಾ ಇದ್ರು,ಆಮೇಲೆ ಹೇಗೆ ಅಭಿರುದ್ದಿ ಮಾಡಿದ್ರೂ,ಅದರಲ್ಲಿ ಅನುಭವಿಸಿದ ಕಷ್ಟ ನಷ್ಟಗಳು ಎಲ್ಲಾ ವಿವರಿಸಿದ್ದಾರೆ..ಆದರೆ ಸಮಯದ ಅಭಾವ ಹಾಗೂ ಸಂಡೇ ಭಾನುವಾರ😂 ಆಗಿದ್ದರಿಂದ ಜಾಸ್ತಿ ವಿವರಣೆ ನೋಡೋಕೆ ಆಗಲಿಲ್ಲ ಜನ ಕೂಡ ಜಾಸ್ತಿ ಇದ್ದರು..

ಬ್ರೈಟನ್ ಟಮ್ಮಿ

ಬ್ರೈಟನ್,ಸಾಗರದ ಬೀಚ್ ನಲ್ಲಿ ಇರುವ ಈ structure ನ್ನ British Airways I360 ಎನ್ನುತ್ತಾರೆ..
ಇದನ್ನ 2016 ಆಗಸ್ಟ್ ನಲ್ಲಿ,ಕೋಕಾ ಕೋಲಾ ಲಂಡನ್ ಐ ಯನ್ನ ಡಿಸೈನ್ ಮಾಡಿದ ಟೀಮ್ ಹೆಚ್ಚಿನ ಡಿಸೈನರ್ಸ್ ಇದನ್ನು ಡಿಸೈನ್ ಮಾಡಿದ್ದಾರೆ..
ಸುಮಾರು 450 ಅಡಿ ಎತ್ತರ ವಿರುವ ಒಂದು ಪಿಲ್ಲರ್ ಗೆ  ಸಂಪೂರ್ಣ ಗ್ಲಾಸ್ ಇರುವ ಡ್ಯೂಮ್ (pod) ಅಳವಡಿಸಲಾಗಿದೆ,ಇದು ತನ್ನ ಒಡಲಿನಲ್ಲಿ ಹೋಟೆಲ್ ಹಾಗೂ ಇನ್ನಿತರೆ ಶಾಪ್ ಹೊಂದಿದೆ..ಹಲವು ಜನರನ್ನ ಹೊತ್ತು 450 ಅಡಿ ಎತ್ತರದ ವರೆಗೆ ನಿಧಾನವಾಗಿ ಮೇಲೆ ಹೋಗಿ,ಅಷ್ಟು ಎತ್ತರದಿಂದ ಸಾಗರ ಹಾಗೂ ಬ್ರೈಟನ್ ಊರಿನ ಸುಂದರ ನೋಟವನ್ನ ನೋಡಲು ಅನುಕೂಲ ಮಾಡಿಕೊಡುತ್ತೆ...ಪ್ರತಿ ಅರ್ಧಗಂಟೆಗೆ ಒಮ್ಮೆ ಸಂಚರಿಸುವ ಇದು,ಮೇಲೆ ಹೋಗಿ ಕೆಳಗೆ ಬರಲು ಸುಮಾರು 25 ನಿಮಿಷ ತೆಗೆದು ಕೊಳ್ಳುತ್ತದೆ..
ಒಮ್ಮೆ ಇದರಲ್ಲಿ ಸಂಚರಿಸಲು £ 15 (ಬೇರೆ ಬೇರೆ ದಿನಗಳಲ್ಲಿ ಟಿಕೆಟ್ ದರ ವ್ಯತ್ಯಾಸವಾಗುವುದು ಇದೆ).. ಕೊಡಬೇಕು..ಹೋಟೆಲ್ ಇನ್ನಿತರೆ ಬೇರೆ ಬೇರೆ ಹಣ ಕೊಡಬೇಕು...

ಲಂಡನ್ ಐ ಇದ್ದ ಹಾಗೆ
ಇದನ್ನ ಬ್ರೈಟನ್ ಟಮ್ಮಿ ಎನ್ನಬಹುದೋ ಏನೋ..😂

ಮ್ಯಾಡಮ್ ಟ್ಯುಸಾದ್

Madam tussauds..
wax museum..
ಇದು ಲಂಡನ್ ನ ಒಂದು ಅತ್ಯಂತ ಜನಪ್ರಿಯ ಪ್ರವಾಸಿತಾಣ,
Madam tussauds ಹೆಸರಿನ ಮಹಿಳೆ ಈ ಅರಗಿನ ಕಲಾಕೃತಿಯ ಕರ್ತೃ..
ಈ ಮಹಿಳೆಯ ನಿಜವಾದ ಹೆಸರು,Marie Grosholtz 1761ರಲ್ಲಿ ಸ್ಟಾರ್ಸ್ಬ ಬರ್ಗ್, ಪ್ರಾನ್ಸ್ ದೇಶದಲ್ಲಿ ಜನಿಸಿದ್ದರು,ಅವರ ತಾಯಿ "ಕರ್ಟಿಸ್" ವ್ಯಾಕ್ಸ್ ಮಾಡೆಲಿಂಗ್ ಕೌಶಲ್ಯ ತುಂಬಾ ಚನ್ನಾಗಿ ತಿಳಿದಿದ್ದರಂತೆ,ತನ್ನ ಈ ಮೇಣದ ಕಲಾಕೃತಿಯ ಕೌಶಲ್ಯವನ್ನ ಬಹಳ ಚಿಕ್ಕವಳಿದ್ದ ಮಗಳಿಗೂ ದಾರೆ ಎರೆದಿದ್ರು ತಾಯಿ..!
Grosholtz 1777 ರಲ್ಲಿ  ಸರಿ ಸುಮಾರು 17 ವರ್ಷದವರಿದ್ದಾಗ ಮೊಟ್ಟ ಮೊದಲ ಮೇಣದ ಕಲಾಕೃತಿ ರಚಿಸಿದ್ದಂತೆ.ಪ್ರಾನ್ಸ್ ರೇವಲ್ಯೂಷನ್ ಸಮಯದಲ್ಲಿ ಯಾವುದೋ ಸಣ್ಣ ವಿಷಯಕ್ಕೆ ಜೈಲಿಗೆ ಸಹ ಹೋಗಿದ್ದರಂತೆ ಈ ಕಲಾಕೃತಿಯ ರಚನೆಯ ವಿಷಯದಲ್ಲಿ,ಆಮೇಲೆ ಕೆಲವು ಕಲಾಕೃತಿ ರಚಿಸಿದ್ದ ದೊಡ್ಡವರು ಇವರನ್ನ ಜೈಲಿನಿಂದ ಹೊರ ತರಲು ಸಹಕರಿಸಿದ್ದರಂತೆ,ಅವರು 1795 ರಲ್ಲಿ Francois Tussaud ಎಂಬುವವರನ್ನ ಮದುವೆ ಆಗಿ,ಅವರ ಸರ್ ನೇಮ್ ನ್ನ ಇಟ್ಟುಕೊಂಡು,Madam taussaud ಆಗಿ ಬದಲಾಗಿದ್ದರು. ಇವರು ಮಾಡಿದ ಎಲ್ಲಾ ಜನಪ್ರಿಯ ವ್ಯಕ್ತಿಗಳ ಪ್ರತಿಮೆ ಇಟ್ಟುಕೊಂಡು ಬೇರೆ ಬೇರೆ ಕಡೆ ಓಡಾಡಿ ಶೋ ನಡೆಸುತ್ತಾ ಇದ್ದರಂತೆ,
ಅದಕ್ಕೆ Madame tussaud ಅಂತ ಹೆಸರು ಇಟ್ಟರಂತೆ 1802 ರಲ್ಲಿ ಲಂಡನ್ ನಲ್ಲಿ ಹಲವು ಶೋ ನಡೆಸಿ ವಾಪಾಸ್ ಪ್ರಾನ್ಸ್ ಹೋಗಲು ಸಾಧ್ಯವಾಗಲಿಲ್ಲವಂತೆ,

ಕಾರಣ ನೆಪೋಲಿಯನ್ ವಾರ್ ನಡೆಯುತ್ತಾ ಇತ್ತು..

ಆದ್ದರಿಂದ ಅವರು ಗ್ರೇಟ್ ಬ್ರಿಟನ್ ಎಲ್ಲಾ ಕಡೆ ಹಾಗೂ ಐರ್ಲೆಂಡ್ ಹಲವು ಕಡೆ ವ್ಯಾಕ್ಸ್ ಪ್ರದರ್ಶನ ಮಾಡಿ ಕೊನೆಗೆ,
1831 ಕ್ಕೆ Baker street bazar ನಲ್ಲಿ ತಮ್ಮ ವ್ಯಾಕ್ಸ್ ಗಳನ್ನ ಪರ್ಮನೆಂಟ್ ಆಗಿ ಇಡಲು ಒಂದು ವ್ಯವಸ್ಥೆ ಮಾಡಿದರಂತೆ..
ಇದು taussads ಮೊದಲ ಖಾಯಂ ಮನೆಯಾಗಿ ಮಾರ್ಪಟ್ಟಿತು..
ಇದರಲ್ಲಿ ಈಗ ಹಲವು ಜನಪ್ರಿಯ ದೇಶಗಳ ನಾಯಕರು,ಕ್ರೀಡಾಳುಗಳು,ಚಲನಚಿತ್ರನಟರು,ವಿಜ್ಞಾನಿಗಳು,ಸಾಮಾಜದ ಗಣ್ಯರು,ಧರ್ಮಗುರುಗಳು ಹಾಗೂ ಇಂಗ್ಲೆಂಡ್ ರಾಜ ಮನೆತನದವರ ಹಲವು ಪ್ರತಿಮೆಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ..

ಇಲ್ಲಿ ನಮ್ಮ,ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಕೂಡ ಇತ್ತೀಚೆಗೆ ಇಡಲಾಗಿದೆ..
ನಮ್ಮ ಬಾಲಿಉಡ್ ನಟರಾದ ಅಮಿತಾಬ್,ಶಾರುಖ್,ಸಲ್ಮಾನ್,ರುತಿಕ್,ಹಾಗೂ ಮಾಧುರಿ ದೀಕ್ಷಿತ್ ನೆನೆ,ದೀಪಿಕಾ ಪಡುಕೋಣೆ ಸಿಂಗ್(!),ಪ್ರಿಯಾಂಕ ಚೋಪ್ರಾ ನಿಕ್ ಅವರ ಪ್ರತಿಮೆ ಕೂಡ ಇಡಲಾಗಿದೆ..

ಈ ಅರಗಿನ ಮ್ಯೂಸಿಯಂ ಈಗ ನಮ್ಮ ದೇಶದ ರಾಜಧಾನಿ ದೆಹಲಿಯಿಂದ(2017 Dec) ಹಿಡಿದು
ಏಷಿಯಾ
ಯುರೋಪ್
ಉತ್ತರ ಅಮೇರಿಕಾ
ಆಸ್ಟ್ರೇಲಿಯಾ
ದಲ್ಲಿರುವ ಸುಮಾರು 24 ಕ್ಕೂ ಹೆಚ್ಚು ಜನಪ್ರಿಯ ನಗರಗಳಲ್ಲಿ ಸ್ಥಾಪಿಸಲಾಗಿದೆ..
ಇದಕ್ಕೆ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಟ್ಟು ತಮ್ಮ ಮೆಚ್ಚಿನ ವ್ಯಕ್ತಿಗಳ ಪ್ರತಿಮೆಗಳ ಜೊತೆ ಫೋಟೋ ತೆಗಸಿ ಕೊಂಡು ಖುಷಿ ಪಡ್ತಾರೆ..
ಅಂದ ಹಾಗೆ ಇದರ ಪ್ರವೇಶಕ್ಕೆ ಶುಲ್ಕ ಇದೆ ಹಾಗೂ ಪ್ರವೇಶ ಬುಕ್ ಮಾಡಿ ಮೊದಲೇ ಕಾಯ್ದಿರಿಸಿ ಅವರು ಕೊಟ್ಟ ಸಮಯಕ್ಕೆ ಅಲ್ಲಿ ಹಾಜರು ಇರಬೇಕಾಗುತ್ತದೆ..
ಮ್ಯಾಡಮ್ ತುಸಾಡ್ ಮೇಣದ ಪ್ರತಿಮೆಯೊಂದಿಗೆ, ಸೂಪರ್ ಹೀರೋಗಳ 4D ಚಿತ್ರ ಹಾಗೂ ಲಂಡನ್ ಶೋ ಅಂತಲೂ ತೋರಿಸುತ್ತಾರೆ,ಆದರೆ ಇದೆಲ್ಲಾ ಓಡಾಡುತ್ತಾ ನಿಧಾನವಾಗಿ ನೋಡಲು ನಿಮ್ಮ ಕಾಲು ಗಟ್ಟಿ ಇರಬೇಕು,ಹಾಗೆ ಏನಾದ್ರು ತಿನ್ನಲು,ಕುಡಿಯಲು,ರಾಣಿಯ ಪ್ರತಿಮೆ ಹಾಗೂ ಇನ್ನಿತರೆ ಪ್ರತಿಮೆ ಜೊತೆ ಫೋಟೋ ತೆಗೆಸಿ ಕೊಂಡು ಅದರ ಪ್ರತಿ ಪಡೆಯುವ ಅವಕಾಶ ಕೂಡ ಇದೆ ಅದಕ್ಕೂ(ಲಂಡನ್ ಅಜ್ಜಿ) ಜೇಬು ಗಟ್ಟಿ ಇರಬೇಕು ಅಷ್ಟೇ....

(ವಿ.ಸೂ:-madam tussaud ಅವರ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಬರೆಯಲಾಗಿದೆ.)

ಯೂರಿ ಗಗಾರಿನ್

4 ಮಾರ್ಚ್ 1934ರಲ್ಲಿ ರಷ್ಯಾದ ಕ್ಲುಶಿನೋ ಎಂಬ  ಹಳ್ಳಿಯಲ್ಲಿ ಹುಟ್ಟಿ ಬೆಳೆದು,steel plant ನಲ್ಲಿ foundry man ಆಗಿದ್ದವನು,ಹೆಚ್ಚಿನ ವಿದ್ಯಾಭ್ಯಾಸ ಮಾಡಿ,ಪೈಲಟ್ ಟ್ರೈನಿಂಗ್ ತೆಗೆದು ಕೊಂಡು,soviet space programmer ಆಗಿ,ಆಮೇಲೆ ತುಂಬಾ ಪರೀಕ್ಷೆಗಳು ಹಾಗು ಟ್ರೈನಿಂಗ್ ನಂತರ  ಗಗನ ಯಾತ್ರಿಯಾಗಿ ಆಯ್ಕೆ ಆಗಿ 12 ಏಪ್ರಿಲ್  1961 ರಲ್ಲಿ Vostok-1 ಎಂಬ ನೌಕೆಯೊಂದಿಗೆ ಗಗನಕ್ಕೆ ಪ್ರಯಾಣಿಸಿದ,ವಿಶ್ವದ ಮೊತ್ತ ಮೊದಲ ಮಾನವ ಗಗನ ಯಾತ್ರಿ ರಷ್ಯಾ ದೇಶದ ಯೂರಿ ಗಗಾರಿನ್ ..
ರಷ್ಯಾದ ಅತ್ಯಂತ ಶ್ರೇಷ್ಠ ಪ್ರಶಸ್ತಿ the hero of the nation ಭಾಜನರಾದವರು ಹಾಗೂ ಈ ಯಾತ್ರೆಯ ನಂತರ ಬಹಳ ಜನಪ್ರಿಯ ಕೂಡ ಆಗಿದ್ದವರು..

ನಂತರ ಮತ್ತೆ  ಗಗಾರಿನ್,ಸೋವಿಯತ್ ಲಿಫ್ಟ್ programme ನಲ್ಲಿ,ತಮ್ಮ ಸ್ನೇಹಿತರಾದ ವಲಾಡಿಮರ್ ಕೋಮರಾವು ಎಂಬುವವರಿಗೆ ಬ್ಯಾಕ್ ಅಪ್ ಕ್ರು ಆಗಿ 23 ಏಪ್ರಿಲ್ 1967ರಲ್ಲಿ Soyuz-1 ಎಂಬ ನೌಕೆಯಲ್ಲಿ ಪ್ರಯಾಣ ಬೆಳೆಸುತ್ತಾರೆ ಆದರೆ ತಾಂತ್ರಿಕ ಕಾರಣದಿಂದ ಅದು ಪತನವಾಗಿ ಅವರ ಸ್ನೇಹಿತ ಮರಣ ಹೊಂದುತ್ತಾರೆ,ತಮ್ಮ ಸ್ನೇಹಿತನ ಸಾವನ್ನ ಕಣ್ಣಾರೆ ಕಂಡ ಗಗಾರಿನ್ ಹೆದರಿ ಬಿಡ್ತಾರೆ..
ಅದಕ್ಕಾಗಿ ಸೋವಿಯತ್ ಅಧಿಕಾರಿಗಳು ಯೂರಿ ಗಗಾರಿನ್ ರನ್ನ,ಶಾಶ್ವತವಾಗಿ ಗಗನ ಯಾತ್ರೆಯ ಕೆಲಸದಿಂದ ಬ್ಯಾನ್ ಮಾಡಿ ಬಿಡ್ತಾರೆ,
ನಂತರ ಇವರು zhukovsky airforce engineering academy ಯಲ್ಲಿ ಹೆಚ್ಚಿನ ಪೈಲಟ್ ತರಭೇತಿ 17 febraury 1968 ರಲ್ಲಿ ಮುಗಿಸುತ್ತಾರೆ ಹಾಗೂ ವಿಮಾನಗಳನ್ನ ಚಲಾಯಿಸಲು ಅಧಿಕೃತ ಅನುಮತಿ ಪಡೆಯುತ್ತಾರೆ..!

ನಂತರ

27 ಮಾರ್ಚ್ 1968 ರಲ್ಲಿ ಅಂದರೆ ಸುಮಾರು 5 ವಾರಗಳ ನಂತರ ಏರ ಬೇಸ್ ಟ್ರೇನಿಂಗ್ ನಲ್ಲಿ ಇನ್ನೊಬ್ಬ Instructor ಪೈಲಟ್ ಜೊತೆ MIG-15 ನಲ್ಲಿ ಸಾಗುತ್ತಾ ಇರುವಾಗ kirzach ಎಂಬ ಪಟ್ಟಣದ ಬಳಿ ವಿಮಾನ ಅಪಘಾತ ಆಗಿ instructor ಪೈಲಟ್ ಜೊತೆ ಯೂರಿ ಗಗಾರಿನ್ ಎಂಬ ವಿಶ್ವದ ಮೊಟ್ಟ ಮೊದಲ ಗಗನ ಯಾತ್ರಿಯ ಜೀವನ ಕೊನೆ ಗೊಳ್ಳುತ್ತೆ,ಆಗ ಅವರ ವಯಸ್ಸು ಕೇವಲ 34...
ಅವರಿಗೆ ಎರಡು ಹೆಣ್ಣು ಮಕ್ಕಳು..
😊

ಸೋಲಾರ್ ಸಿಸ್ಟಮ್ ಕತೆ

ಬೆಂಗಳೂರಿಂದ ಶಿವಮೊಗ್ಗ ಸುಮಾರು 302 ಕಿ.ಮೀ ದೂರವಿದೆ..
ಅದನ್ನ ಕ್ರಮಿಸಲು ಸ್ವಂತ ವಾಹನಕ್ಕೆ ಸುಮಾರು 60km/h ನಲ್ಲಿ ಹೋದರೆ 5 ಗಂಟೆ ಬೇಕು..!

ಅದೇ ಸೋಲಾರ್ ಸಿಸ್ಟಮ್ ಒಳಗೆ ಓಡಾಡುವ ನೌಕೆ Intersellar spacecraft(Ex:-voyager)(ಬಾಹ್ಯಾಕಾಶ ನೌಕೆ) 59,000ಕಿಲೋಮೀಟರ್ ಪ್ರತಿ ಗಂಟೆಗೆ ಕ್ರಮಿಸುತ್ತದೆ,

ಈ space craft (ಬಾಹ್ಯಾಕಾಶ ನೌಕೆ)ನಲ್ಲಿ Proxima centuriಗೆ ಅದೇ ವೇಗದಲ್ಲಿ ಪ್ರಯಾಣ ಮಾಡಿದರೆ,ಆ ಪ್ರಯಾಣ ಕ್ಕೆ ಸುಮಾರು 80,000 ವರ್ಷ ಸಮಯ ಬೇಕಾಗುತ್ತದೆ...!

(#Proxima_centauri ಎಂದರೆ ಒಂದು ಸಣ್ಣದಾದ,ಕಡಿಮೆ ಸಾಂದ್ರತೆ ಹೊಂದಿರುವ 2.400(Light year) ಜ್ಯೋತಿರ್ವರ್ಷ ದೂರ ಸೂರ್ಯನಿಂದಲೂ ಆಚೆ ಇರುವ ಒಂದು ನಕ್ಷತ್ರ,1915 ರಲ್ಲಿ ರಾಬರ್ಟ್ ಇನ್ನ್ಸ್ ಅನ್ನೋರು ಕಂಡು ಹಿಡಿದರು ಎನ್ನಲಾಗಿದೆ ಇದು ಸೂರ್ಯನಿಗೆ ಹತ್ತಿರದ ನಕ್ಷತ್ರವಂತೆ..! )

ಆದರೆ ಮನುಷ್ಯನ ಜೀವಿತಾವಧಿ ಇರೋದೇ 70 ರಿಂದ ಹೆಚ್ಚು ಅಂದರೆ 100 ವರ್ಷ ಅಂತಿಟ್ಟು ಕೊಳ್ಳೋಣ..(ಅದು ಆ ವ್ಯಕ್ತಿಯ ಆರೋಗ್ಯದ ಮೇಲೆ).

ಹಾಗಾದರೆ

ಅದೇ Intersellar spacecraft voyager ನಲ್ಲಿ(ಬಾಹ್ಯಾಕಾಶ ಗಗನ ನೌಕೆಯಲ್ಲಿ),Proxima centuri ಗೆ ಒಬ್ಬ ಮನುಷ್ಯನ ತನ್ನ ಜೀವಿತ ಅವಧಿಯಲ್ಲಿ ತಲುಪಲು
ಅದೇ ಭಾಹ್ಯಾಕಾಶ ಗಗನ ನೌಕೆ ಅಷ್ಟು ದೂರ ಕ್ರಮಿಸಲು ಎಷ್ಟು ವೇಗದಲ್ಲಿ ಪ್ರಯಾಣ ಮಾಡಬೇಕಾಗಬಹುದು ಅಂತ ನೀವೇ ಊಹಿಸಿ...!

Proxima centauri ಗೆ ಕ್ರಮಿಸಲು
ವಿವಿಧ ವಾಹನಗಳು ತೆಗೆದು ಕೊಳ್ಳುವ ಸಮಯ..
ಉದಾಹರಣೆಗೆ▶️

🔷88 ಕಿಲೋಮೀಟರ್ ಪ್ರತಿಗಂಟೆಗೆ ಕ್ರಮಿಸುವ ಕಾರಿಗೆ, Proxima Centauri ತಲುಪಲು ಬೇಕಾಗುವ ಸಮಯ-----50,000,000 ವರ್ಷಗಳು.

🔷ಕೇವಲ 3 ದಿನದಲ್ಲಿ ಚಂದ್ರ ಗ್ರಹಕ್ಕೆ ತಲುಪುವ ರಾಕೆಟ್ ಗೆ,
Proxima centauri ತಲುಪಲು ಬೇಕಾಗುವ ಸಮಯ------900,000 ವರ್ಷಗಳು.

🔷59,000 ಕಿಲೋಮೀಟರ್ ಪ್ರತಿ ಗಂಟೆಗೆ ಕ್ರಮಿಸುವ voyager spacecraft(ಬಾಹ್ಯಾಕಾಶ ನೌಕೆ)ಗೆ, Proxima centauri ತಲುಪಲು ಬೇಕಾಗುವ ಸಮಯ--------80,000 ವರ್ಷಗಳು.

ಎಷ್ಟು ದೂರ.... ದೂರಕ್ಕಿಂತ ದೂರ ಎಂದರೆ..?

ಭೂಮಿಯಿಂದ ಚಂದ್ರನಿಗೆ 5 ಮಿಲೀ ಮೀಟರ್ ಮತ್ತು ಭೂಮಿಯಿಂದ ಸೂರ್ಯನಿಗೆ 1250 ಮಿಲೀ ಮೀಟರ್
ಅಂತಿಟ್ಟುಕೊಳ್ಳಿ..
ಅದೇ
ಭೂಮಿಯಿಂದ Proxima centauri ಗೆ ಅಂದಾಜು ಸುಮಾರು 320 ಕಿಲೋ ಮೀಟರ್ ಆಗುತ್ತದೆ..
ಅಂದರೆ ಬೆಂಗಳೂರಿನಿಂದ ಶಿವಮೊಗ್ಗ ಹೋಗಿದ್ದಕ್ಕಿಂತ 18 ಕಿ.ಮೀ ಜಾಸ್ತಿ..

ಅಂದರೆ
5 mm ಊಹಿಸಿಕೊಳ್ಳಿ
1250 mm ಊಹಿಸಿ ಕೊಳ್ಳಿ
ಆಮೇಲೆ
ಬೆಂಗಳೂರಿಂದ ಶಿವಮೊಗ್ಗಕ್ಕೆ ಇರುವ ದೂರ ಊಹಿಸಿಕೊಳ್ಳಿ..

ಆಗ ತಿಳಿಯುತ್ತೆ
ಎಷ್ಟು ದೂರ..!?
ಕ್ರಮಿಸಲು ಎಷ್ಟು ಸಮಯ ಬೇಕು..!?
ಎಷ್ಟು ವೇಗ ಬೇಕು..!?

ಹೇಗಿದೆ ಸೋಲಾರ್ ಸಿಸ್ಟಂ ನ ಸಿಸ್ಟಮ್ ಕತೆ..

ಇಮಾನದ್ ಕತೆ

ಮಂಜಪ್ಪ ಗೌಡ್ರು ಸುಮಾರು ದಿನ ಕಾಣಿಸ್ತಾ ಇರ್ಲ..
ಒಂದಿನ ಎಲೆಡಿಕೆ ಜಗೀತಾ ಮಧ್ಯ ರೊಡಲ್ಲಿ ಬೀಸ್ ಕಾಲ್ ಹಾಕಿತಾ ಬತಾ ಅದಾರೆ..
ಕ್ವಾಸ್ ಓಡೋಗಿ..
ಹ್ವಾಯ್ ಎಂತಾ..ಪತ್ತೆ ಇರ್ಲ ಎತ್ಲ್ಯಾಗ್ ಹೋಗಿದ್ರಿ ಮರ್ರೆ ಇಷ್ಟು ದಿನ ಅಂದ..

ಮರೇನೇ..
ನಮ್ಮನೆ ಪುಟ್ಟಿ ಅದ್ಯಲ್ಲ ಅದ್ರ ಗಂಡ ಅದೆಂತದೋ ಮಸ್ಕತ್ ಬಿಸ್ಕತ್ ಎಂತದೋ ಅದ್ಯಲ್ಲ ಸಾಬ್ರು ದೇಶ ಅಲ್ಲಿ ಅದಾನೆ, ನಮ್ಮ ಸಾಬ್ರು ದೇಶ,ಹಠ ಮಾಡಿ ಇಮಾನ್ ಹತ್ಸಿ ಗಿ ಅಲ್ಲಿಗ್ ಕರ್ಕು ಹೋಗಿದ್ದ ನನ್ನ ಮತ್ತೆ ನಮ್ಮನೆ ಅದನ್ನ..
ಅದೆಂತದೋ ಅಮ್ಮನ್ ಏರ್ ಲೈನ್ಸ್ ಅಂತೆ ಮರೇನೇ ಅದ್ರಲ್ಲಿ...
ಕ್ವಾಸ:- ಗೌಡ್ರೆ..ಅಮ್ಮನ್ ಏರ್ ಲೈನ್ಸ್ ಅಂತೆಲ್ಲಾ ಇರಲ್ಲ ಮರ್ರೆ .
ತಡೀರಿ ಗೂಗಲ್ ನಲ್ಲಿ ನೋಡಿ ಹೇಳ್ತೀನಿ..
ಅದು ಒಮನ್ ಏರ್ಲೈನ್ಸ್ ಮರ್ರೆ ಥೋ..
ಗೌಡ್ರು:- ಎಂತುದೋ ಬಿಂಕಿ ಹೆಟ್ಟಿದ್ದು..
ಆರೆ, ಅಲ್ಲಿ ಕಾಪಿ ಟೀ ಕೊಡಕ್ ಬತ್ತವಲ್ಲ ಹೆಣ್ಣಾಳು ಎಷ್ಟು ಘನಾಗಿರ್ತಾವೆ ಮರೇನೇ..
ಎಂತಾರು ಕೇಳು ಬೇಜಾರ್ ಮಾಡಕಿನದೆ ಇಲ್ಲ..
ನಗ್ಯಾಡ್ತಾ,ಕೊಡ್ತಾವೆ..
ನಮ್ಮನೆ
ಅದಕ್ಕೆ,ಉಂದು ಹುಂಡು ಕಾಪಿ ತಗುಬಾರೆ ಅಂದ್ರೆ..ಬಾಯಿಗೆ ಬಂದಂಗ್ ಬೈತದೆ ಮರೇನೇ..ನಿಮಗ್ ಉಂದು ಎಷ್ಟೊತ್ತಿಗೂ ಕಾಪಿ,ತಗು ಹೋತದಾ ಅಂತ..
ಆದ್ರೆ ಇಲ್ ಹಂಗಲ್ಲ ನೋಡು..
ಎಷ್ಟು ಚಂದ ಇರ್ತಾವೆ ಅಂತಿಯಾ ಹಿನ್ನಾಳು.ಕೈ ತೊಲ್ಕು ಮುಟ್ ಬಕು ಗೊತ್ತಾ..
ಕ್ವಾಸ:-ಗೌಡ್ರೆ..ಹಂಗೆಲ್ಲಾ ಹುಡುಗಿಯರನ್ನ ಮುಟ್ಟಿದ್ರೆ ಸುಮ್ನೆ ಇರ್ತಾರ,ಅವರು ಹೆಣ್ಣಾಳಲ್ಲ ಮರ್ರೆ..Steward ಅಂತಾರೆ..ಅವರ ಕೆಲಸವೇ ಅದು ಗೊತ್ತಾ.
ಗೌಡ್ರು:-ಏ. ಮಾತಿಗೆ ಹೇಳಿದ್ದು ಮರೇನೇ..ನಾನು ಎಂತಕೆ ಮುಟ್ಟು ಕು ಹೋತಿನಿ..ಪಕ್ಕದಲ್ಲೇ ನಮ್ಮನೆ ಅದು ಕೂತಿತ್ತು ಗೊತ್ತಾದ್ಯಾ..
ಅಲ್ಕೋ ಹಾಲ್,ನಾನು ಆಲ್ಕೋಹಾಲ್ ಅಂತ ಎಂತದೋ ಕೇಳ್ತು ಉಂದು ಸಣ್ಣ ಹಿಣ್ ಆಳು.. ನಂಗೇನು ಇಂಗ್ಲಿಷ್ ಬತ್ತದ,ನಾನು ಕೊಟ್ಟೆ ಅದ್ಯಾ(ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡರೆ ಬಿಡು).ಉಂದು ಬಾಜಲ್,ಉಪ್ಪಿನ ಕಾಯಿ ಕೊಡಿ ಅಂದೆ..ನಮ್ಮನೆ ಅದು ಅಲ್ಲೇ ಚುಗುಟುತು..ಆಮೇಲೆ ನನ್ನ ಅಳಿಯ ಅದೆಂತದೋ ಹೇಳಿ,ತಗುಂಡು ಕೊಟ್ಟ..
ಎಂತಾ ತಾಗ್ಲ ಮರೇನೇ..
ಆಮೇಲೆ ಸೇಬು ಹಣ್ಣು,ಕಿತ್ತಳೆ ಹಣ್ಣು ಜ್ಯುಸ್ ಎಲ್ಲಾ ಕೊಡ್ತಾರೋ.ಕಾಪಿ ಮಾತ್ರ ಕರಿ ಕಾಪಿ,ಹಾಲು ಉಂದು ಸುಣ್ಣದ ಪಾಸ್ಟ್ಲಿಕ್ ಡಬ್ಬಿ ಬತ್ತದಲ್ಲ ಹಂಗಿದ್ರಲ್ಲಿ ಕೊಡ್ತದೆ ಆ ಹುಡುಗಿ..ನಾವು ಹಾಲು ಕರೆಯಾಕಿಂತ ಮುಂಚೆ ಸೊಪ್ಪಿನ ಕೊಟ್ಟಿಗಿಗೆ ಬಿಡ್ತೀವಲ್ಲ ಅಷ್ಟೇ ಕೊಡದು..ನಮಗೆಲ್ಲಿ ಸಾಕಾತದೇ..ಮತ್ತೆ ಸಕ್ಕರೆ ಎಲ್ಲಾ ಶಣ್ಣ ಪ್ಯಾಕಲ್ಲಿ ಕೊಡ್ತಾವೆ,ಅದನ್ನು ಎಲ್ಲಾ ಓಪನ್ ಮಾಡಿ ಹಾಕುಂದು ನಾವೇ ಕಡ್ಡಿಲಿ ಅಲ್ಲಾಡಿಸ್ಗಿಂದು ಕುಡಿಬೇಕು ಅಷ್ಟೆಯಾ.. ಸಹವಾಸಲ್ಲ ಮರೇನೇ ಈ ಇಮಾನದ್ದು..ಥೋ..
ಅಲ್ಲ ನಾ..ಆ ಹೆಣ್ಣಾಳು ನೋಡಿ ಯಕ್ಷಗಾನ ಸ್ತ್ರೀ ಪಾತ್ರ ಹಾಕಿದೋರು ಅಂದು ಕುಂಡಿದ್ದೆ ಅಷ್ಟು ಸ್ನೋ ಪೌಡರು ಹಚ್ಚಿ ಕೊಂಡ್ ಬತ್ತವೆ ನೋಡು..
ಮತ್ತೆ ಬಂದ್ ಕುಂಡು, ಬೆಲ್ಟ್ ಹಾಕ್ಯಲಿ ಅಂತಾವೆ,ನಾನೆಲ್ಲಿ ಪಂಚೆ ಉಟ್ಟಿನಿ ಬೆಲ್ಟ್ ಎಂತಕೆ ಅಂದೆ ನನ್ನ ಅಳಿಯನ ಹತ್ರ..ಅವ ಅದಲ್ಲ ಮರ್ರೆ ಸೀಟಲ್ ಇರ್ತದಲ್ಲ ಅದು ಅಂದ..ಕಡಿಗೆ ಅದೇ ಬಂದು ಹಾಕ್ತು.. ಒಳ್ಳೆ ಖುಷಿ ಆತು ಮರೇನೇ..
ಊಟ ಅಂತ ಕೊಡ್ತಾರೆ ಮರೇನೇ..ನಮ್ಮನೆ ಅಂಚು ಕಡಿಯೋನಿಗೆ ಅಂತದ್ದು 20 ಕೊಟ್ರು ಸಾಕಾಗಲ್ಲ ಹ್ವಾ...
ಉಂದೆ ಮುಷ್ಟಿ ಮರೇನೇ..ಥೋ..
ನಾನು ನೋಡದು ಇಮಾನ ಮೇಲೆ ಹಾರಿ ಇಷ್ಟು ಹೊತ್ತು ಅಗ್ಯದೆ ನಿತ್ತಲ್ಲೇ ನಿತ್ತದೆ ಎಂತಾ ಕತೆ ಅಂತ...ಎಲ್ಲಾರೂ ಡ್ರೈವರ್ ಅಲ್ಲೇ ನಿಲ್ಲಿಸಿ,ಉಚ್ಚೆ ಹುಯ್ಕಿ ಬತ್ತಿನಿ,ಉಂದು ಗುಟ್ಕಾ ಬಾಯಿಗೆ ಹಾಕಿಂದು ಅಂತ ಹೋದ್ನಾ ಅಂತ..ಆಮೇಲೆ ನನ್ ಅಳಿಯ ಹೇಳ್ದ ಹಾಂಗೆ ಕಾಣಿಸದು ಮರ್ರೆ..ಹೋತಾ ಇರ್ತದೇ ಅಂತ...

ಮಾನದಂಡ

ಇಂಜಿನಿಯರ್ ಆಗಿದ್ರೆ ಮಾತ್ರ ಅವನು ಮನುಷ್ಯ ಬೆಂಗಳೂರು ಅಥವಾ ಹೊರದೇಶದಲ್ಲಿ ಇದ್ದವನೆ ಯೋಗ್ಯ ಅಂತ ಹಿಂದೆಲ್ಲಾ ಹೇಳುತ್ತಾ ಇದ್ದ ಕೆಲವು ಜನರು..
ನೋಡಿ ಯಾರು ಹುಡುಗರು ಹಳ್ಳಿಯಲ್ಲಿ ಇರೋದೇ ಇಲ್ಲ..
ಕೆಲಸ,ಮಾಡಿಸೋಕೆ, ಮಾಡೋಕೆ ಜನರೇ ಗತಿ ಇಲ್ಲ,ಕೃಷಿ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ, ಹೀಗಾದ್ರೆ ಕೃಷಿ ಏನಾಗಬೇಕು?ತೋಟ,ಗದ್ದೆಯನ್ನ ವಯಸ್ಸಾದವರು ನಾವು ಈ ಕಾಲದಲ್ಲಿ ವ್ಯವಸಾಯ ಮಾಡೋಕೆ ಆಗುತ್ತಾ..!? ಅಂತ ಬೈಯೋದು ನೋಡಿರುತ್ತೀರಿ....

ಹಿಂದೆ...ಬೆಂಗಳೂರಿನಲ್ಲಿ 75 ಸಾವಿರದ 1 ಲಕ್ಷ ಸಂಬಳ,ಒಂದು ಪ್ಲಾಟ್,ಒಂದು ಕಾರು,ಒಂದೆರಡು ಬೈಕು ಇದ್ದ ವ್ಯಕ್ತಿ ಮಾತ್ರ ಮನುಷ್ಯ,ಯೋಗ್ಯ ಸಮಾಜದಲ್ಲಿ ಒಳ್ಳೆಯ ವ್ಯಕ್ತಿ,ಬೇರೆಯವರೆಲ್ಲಾ ಏನೂ ಸುಖ ಇಲ್ಲ, ಅಯೋಗ್ಯರು ಅನ್ನುವ ರೀತಿಯಲ್ಲಿ ಕೆಲವರ ವ್ಯಾಖ್ಯಾನ ಇರುತ್ತಾ ಇತ್ತು..!

ನೀವೇ ಗಮನಿಸಿ..
ಹಳ್ಳಿಯಲ್ಲಿ,ಡಿಗ್ರಿ ಅಥವಾ ಇನ್ನೇನೋ ಕೋರ್ಸ್ ಮುಗಿಸಿ, ವ್ಯಾಪಾರ ಅಥವಾ ಸ್ವ ಉದ್ಯೋಗ,ಸಣ್ಣ ಪುಟ್ಟ ಉದ್ಯಮ,ಕೃಷಿ ಮಾಡಿಕೊಂಡು ಕೆಲಸ ಮಾಡಿಕೊಂಡು ಇರುವ ಸಣ್ಣ ವಯಸ್ಸಿನ ಹುಡುಗರಿಗೆ..
"ಇಲ್ಲೆಂತ ಮಾಡ್ತಿಯಾ,ಎಷ್ಟು ಕಡಿದ್ರು,ಎಷ್ಟು ಕೆತ್ತಿದ್ರು, ಎಷ್ಟು ಗೊಬ್ಬರ ಹೊತ್ತರೂ ಪ್ರಯೋಜನಾ ಇಲ್ಲ,ನೋಡು ಈ ಸಾರಿ ತೋಟ ಫುಲ್ ಕೊಳೆ, ಗದ್ದೆ ಹೊಳೆ ಹತ್ತಿ ಪೂರ್ತಿ ಕೊಳೆತು ಹೋಗಿದೆ,ಇದೆಲ್ಲಾ ನಂಬಿ ಜೀವನ ಮಾಡಕಾಗುತ್ತನ,
ಸುಮ್ನೆ ಬೆಂಗಳೂರು ಹೋಗ, ಇಲ್ಲೇ ಇದ್ರೆ ಏನು ಮಾಡಕಾಗಲ್ಲ,ನೋಡು ಪಕ್ಕದ ಮನೆ ಪದ್ದ ಅಲ್ಲಿದ್ದಾನೆ,ಆಚೆ ಮನೆ ಮುದ್ದ ಹೊರದೇಶದಲ್ಲಿ ಇದಾನೆ"

ಅಂತ ಅವನಿಗೆ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಇರೋದು ಅವಮಾನ,ಪ್ರಯೋಜನ ಇಲ್ಲ ಅನ್ನುವ ರೀತಿ ಕೀಳರಿಮೆ ಬೆಳೆಸಿ ತಲೆ ಕೆಡಿಸೋ ಕೆಲವು ಊರಿನ ಹಿರಿ ತಲೆಗಳು...

ಆಮೇಲೆ ಅವ್ರೇ..ಎಲ್ಲೋ ಊಟದ ಮನೆ ಮತ್ತೆ ಯಾವುದೋ ಕಾರ್ಯಕ್ರಮದಲ್ಲಿ ಕೂತು ಎಲೆ ಅಡಿಕೆ ತಿಕ್ತಾ..!

"ನೋಡಿ ಎಲ್ಲಾ ಹುಡುಗರು ಅಪ್ಪ,ಅಮ್ಮನ್ನ ಬಿಟ್ಟು ಬೆಂಗಳೂರಿಗೆ,ಹೊರದೇಶ ಅಂತ ಹೋಗಿ..
ಹಳ್ಳಿ ಎಲ್ಲಾ ವೃದ್ದಾಶ್ರಮ ಆಗಿದೆ,ಏನೋ ಆರ್ಜೆ0ಟ್ ಹುಷಾರಿಲ್ಲ ಅಂದರೆ ನೋಡೋಕೆ ಯಾರೂ ಇಲ್ಲ ಎಲ್ಲಾ ಅವರವರ ಜೀವನ ಅವರಿಗೆ,ಜವಾಬ್ದಾರಿ ಇಲ್ಲ ಅಪ್ಪ ಅಮ್ಮನ ಮೇಲೆ ಕಾಳಜಿ,ಗೌರವ ಇಲ್ಲ,ಹೊರದೇಶದ ತರ ಆಯ್ತು ನಮ್ಮ ಊರು ನೋಡು" ಅಂತ
ಸಂತಾಪ ಸೂಚಕ ವಂದನಾರ್ಪಣೆ ಮಾಡೋರು, ಅದೇ ಕೆಲವು ಕೆಲವು ಹಿರಿ ತಲೆಗಳು..!!!

ಊರಲ್ಲಿ ಇದ್ರೆ ಅಪ್ರಯೋಜಕ,ದಡ್ಡ,ಚುರುಕಿಲ್ಲ,ಜಮೀನಲ್ಲಿ ಜೀವನ ಮಾಡಕಾಗಲ್ಲ..

ಊರು ಬಿಟ್ಟು ಹೋದ್ರೆ ಸ್ವಾರ್ಥಿ,ತಂದೆ,ತಾಯಿ,ಜಮೀನಿನ ಮೇಲೆ ಕಾಳಜಿ ಇಲ್ಲ..

ಹೀಗಾದ್ರೆ ಹುಡುಗರು ಏನು ಮಾಡ್ತಾರೆ..!?
ಅವರವರ ಜೀವನ ಅವರೆಲ್ಲಿ ಕಂಡು ಕೊಳ್ತಾರೋ ಅಲ್ಲಿ ಕಂಡು ಕೊಳ್ಳಲಿ..
ಹಣವೇ ಎಲ್ಲಾ ತಂದು ಕೊಡೋದಾದ್ರೆ ಮತ್ತೆ ಸಂಬಂಧಗಳ ಬಗ್ಗೆ ಮಾತು ಯಾಕೆ ಬೇಕು?
ಹಣ ಸಮಾಜದಲ್ಲಿ ಅಚ್ಚುಕಟ್ಟಾಗಿ ಬದುಕೋಕೆ ಬೇಕೇ ಬೇಕು,ಆದರೆ ಸ್ವಲ್ಪ ಹಣ ಗಳಿಸೋನು ಅಪ್ರಯೋಜಕ ಅನ್ನುವ ಮಾತು ಸರಿ ಅಲ್ಲ..
ಅದಕ್ಕೆ ಕೆಲವರು,ಅಪಹಾಸ್ಯ ಮಾಡೋದು ಅಥವಾ ವ್ಯ0ಗ್ಯ ಮಾಡೋದು ನಿಕೃಷ್ಟವಾಗಿ ಕಾಣೋದು ಏನಿದೆ ತಿಳಿಯುತ್ತಾ ಇಲ್ಲ..!

ಬ್ರಿಟೀಷರಿಗೆ ಮೋಸಾ

ಬೆಳಿಗ್ಗೆ 4ಕ್ಕೆ ಎದ್ದು ಇಂಗ್ಲೆಂಡ್ ಹಳ್ಳಿ ಹೇಗಿರುತ್ತೆ ಅಂತ ಕುತೂಹಲದೊಂದಿಗೆ ನಮ್ಮ area ದಿಂದ ಸುಮಾರು 1 ಗಂಟೆ ರೈಲು ಬಸ್ ಎಲ್ಲದರೊಂದಿಗೆ ಕ್ರಮಿಸಿ,east ham ಎಂಬ ಜಾಗಕ್ಕೆ ರಾಜ್ಯದ UK ನಿವಾಸಿಗಳು ಸೇರಿ ಒಂದು mercedezಟೆಂಪೋ ಟ್ರಾವೆಲರ್ ಮಾಡಿ ಟ್ರಿಪ್ ವ್ಯವಸ್ಥೆ ಮಾಡಿದ್ದವರ ಜೊತೆ ಹೊರಟೆವು,ಸುಮಾರು 16 ಜನ ಇದ್ದೆವು..
ಅಲ್ಲಿಂದ ಸುಮಾರು 110 ಮೈಲಿ(176KM)ಹೈವೇಯಲ್ಲಿ ಕ್ರಮಿಸಿದರೆ,cotswolds ಎಂಬ ಹಳ್ಳಿ..

ಅಲ್ಲಿನ ತುಂಬಾ ಹಳೆಯ ಕಟ್ಟಡ ಹಾಗೂ ಹಸಿರು ಜಾಗಕ್ಕೆ ಹೆಚ್ಚಿನ ಜನ ಪ್ರವಾಸಿಗರು ಬರುತ್ತಾರಂತೆ..ಆದರೆ ಮಲೆನಾಡಿನವನಾದ ನನಗೆ ಅದು ಬಹಳ ವಿಶೇಷ ಎಂದು ಅನಿಸಲಿಲ್ಲ ಆದರೆ ಅಲ್ಲಿನ ಸ್ವಚ್ಛತೆ ಹಾಗೂ ಸಣ್ಣ ತೊರೆ,ಹಳ್ಳಗಳಿಗೆ ಕಟ್ಟಿರುವ ಸಣ್ಣ ಸಣ್ಣ ಕಲ್ಲಿನ ಬಹಳ ಹಳೆಯ ಸಂಕ (ಮಲೆನಾಡ ಕಡೆ ಅಡಿಕೆ ಮರದಲ್ಲಿ ಕೃತಕವಾಗಿ ಹಾಕಿರುತ್ತಾರೆ ಈ ರೀತಿಯ ಸಣ್ಣ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತಾ ಇರುವಾಗ ದಾಟುವುದಕ್ಕೆ)ಅಲ್ಲಿನ ಸುತ್ತಲಿನ ಪ್ರದೇಶದ maintainance ಹಾಗೂ ಅಲ್ಲಲ್ಲಿ ಇಟ್ಟಿರುವ ಕಸದ ಡಬ್ಬಿ,ಸ್ವಚ್ಛತೆ ಹಾಗೂ ಪರಿಸರದ ಮೇಲೆ ಅವರಿಗೆ ಇರುವ ಕಾಳಜಿ ಬಗ್ಗೆ ಖುಷಿ ಅನಿಸ್ತು..ನಮ್ಮ ಮಲೆನಾಡು ಅನಿಸುವ ಹಾಗೆಯೇ ಇತ್ತು..
ಎಲ್ಲಿ ಏನಾದ್ರೂ ತಿನ್ನಿ,ಏನಾದ್ರೂ ಕುಡಿಯಿರಿ ಆದರೆ ಕಸವನ್ನ ಎತ್ತಿ ಕಸದ ಡಬ್ಬದಲ್ಲಿ ಹಾಕಿ ಹೋಗಬೇಕು..
ಕೆಲವು ಕಡೆ ಪೇಪರ್ ಹಾಗೂ ಬಾಟಲ್ ಹಾಗೂ ಹಸಿರು ಕಸದ ಡಬ್ಬಿ ಅಂತಲೂ ಇಟ್ಟಿರುತ್ತಾರೆ,ಆದರೆ ಅಲ್ಲಿ ಯಾರೂ "ಏಯ್ ಯಾಕ್ರೀ ಅಲ್ಲಿ ಕಸ ಹಾಕ್ತಾ ಇದೀರಿ,ಏಯ್ ಯಾರೋ ಅದು ಗಲ್ ಫ್ರೆಂಡ್ ನ ಅಬತ್ ಹಿಡಿದು ಕಂಡಿದ್ದು,ಸಭ್ಯವಾಗಿ ಕೂತು ಕೊಳ್ಳಿ,ನಾಚಿಕೆ ಆಗಲ್ವಾ..ಇಲ್ಯಾಕ್ರಿ ನಿಂತಿದ್ದೀರಿ ಅಂತ ಎಲ್ಲಾ ಕೇಳೋಕೆ ಯಾರೂ ಇರಲ್ಲ..ಆದರೆ ಯಾರೂ ಎಲ್ಲೆಂದರಲ್ಲಿ ಕಸ ಹಾಕಲ್ಲ,ಯಾಕೆ ಅಂದರೆ ಅಲ್ಲಿ ಇನ್ನೊಬ್ಬನರು ಕಸ ಎಸೆದದ್ದು ಕಾಣಲ್ಲ, ನಿಮ್ಮ ಗಲ್ ಫ್ರೆಂಡ್ ಜೊತೆ ನೀವು ಹೇಗಾದ್ರೂ ಇರಬಹುದು ಯಾರೂ, ಏನೋ ವಿಶೇಷ ನಡೆಯುತ್ತಾ ಇದೆ ಅಂತ ದೊಡ್ಡ ಕಣ್ಣಿನಿಂದ, ನೋಡುತ್ತಾ ನಿಲ್ಲಲ್ಲ,ವೀಡಿಯೊ ಮಾಡಲ್ಲ,ಎಲ್ಲ್ಲೆಂದರಲ್ಲಿ,urgent ಮರಾಯಾ ಅಂತ ನಲ್ಲಿ ಓಪನ್ ಮಾಡಲ್ಲ ಪರಿಸರದ ಮಡಿಲು ಅಂತ,(ಇಂತಹಾ ಪ್ರವಾಸಿ ಪ್ರದೇಶಗಳಲ್ಲಿ ಹೆಚ್ಚಾಗಿ ಶೌಚಾಲಯ ಇಟ್ಟಿರುತ್ತಾರೆ..)
 ನಾವು ಹೋದ ಜಾಗದಲ್ಲಿ,
ಅಲ್ಲೇ ಹತ್ತಿರ ಟಾಯ್ಲೆಟ್ ಕೂಡ ಇತ್ತು,ಒಂದು,ಎರಡಕ್ಕೆ ಪ್ರಕೃತಿಯ ಮಡಿಲನ್ನ ಆಶ್ರಯಿಸದಂತೆ ಮಾಡಿತ್ತು..😜

ನಾವು ಅಲ್ಲೆಲ್ಲಾ ಓಡಾಡಿ ಒಂದಷ್ಟು ಫೋಟೋ,ಜೊತೆಗಿದ್ದವರು ಸೆಲ್ಫಿ,ಯಥೇಚ್ಛವಾಗಿ ತೆಗೆದು ಕೊಂಡರು,ಆಮೇಲೆ ಅಲ್ಲಿಂದ ಹೊರಡಲು ತಯಾರಾದೆವು,ವಾತಾವರಣ ಬಹಳ ತಣ್ಣಗೆ ಹಾಗೂ ಮೋಡಕವಿದಂತೆ ಇದ್ದ ಕಾರಣ,ಪ್ರಕೃತಿಯ ಒಂದನೇ ಕರೆ ಆಗಾಗ ಬಾಗಿಲು ತಟ್ಟುತ್ತಾ ಇತ್ತು,ಹೆಚ್ಚಿನವರಿಗೆ ಬಾಗಿಲು ತಟ್ಟಲು ಸಮಯವೇ ಇಲ್ಲದ ಲೆವೆಲ್ ಗೆ ಬಂದು ನಿಂತಿತ್ತು..

ಟಾಯ್ಲೆಟ್ ಗೆ ಸುಮಾರು 8 ಜನ ಮೊದಲೇ ಹೋಗಿ ಬಂದಿದ್ದರು..

ಅವರು
ಅಯ್ಯೋ...ಪುಕ್ಷಟ್ಟೆ ಇಲ್ಲ 20 P,ಒಬ್ಬರಿಗೆ..(ಸುಮಾರು 18 ರೂಪಾಯಿ)..
ನಾವು 8 ಜನ ಇಲ್ಲಿ ಇಳಿದ ಕೂಡಲೇ 20P..ನಲ್ಲೇ ಪೀ... ಮುಗಿಸಿ ಬಂದೆವು ಅಂದರು..

ಅದು ಹೇಗೆ ಅಂದರೆ,
ನಮ್ಮ ಟೀಮ್ ನಲ್ಲಿ ಇದ್ದ ಒಬ್ಬರು ಸೀನಿಯರ್ ಒಬ್ಬರು ತಲೆ ಉಪಯೋಗಿಸಿದ್ದರು..

ಒಬ್ಬರು ಹೋಗಿ ಬಾಗಿಲಿನ ಬಳಿ ಇರುವ ಕಾಯಿನ್ ಹೋಲ್ ಗೆ 20P ಹಾಕಿದರೆ ಬಾಗಿಲು ಓಪನ್ ಆಗುತ್ತೆ,ಒಳಗೆ ಹೋಗಿ ಕೆಲಸ ಮುಗಿಸಿ ವಾಪಾಸ್ ಬರುವಾಗ ಬಾಗಿಲು ಕ್ಲೋಸ್ ಮಾಡದೇ,ಇನ್ನೊಬ್ಬರನ್ನ ಒಳಗೆ ಬಿಟ್ಟು ಅವರು ಒಳಗೆ ಹೋದಮೇಲೆ,ಬಾಗಿಲು ಬಿಟ್ಟು ಹೊರಗೆ ಬರೋದು..
ಒಳಗಿದ್ದವರು ನಂತರ ಬಾಗಿಲಿನ ಬಟನ್ ಒತ್ತಿದರೇ ಬಾಗಿಲು ಓಪನ್ ಆಗುತ್ತೆ..

ಹಾಗೆ 20 P...ನಲ್ಲಿ,Pee ಯನ್ನ ಉಳಿದ 5 ಜನ ಹುಡುಗರು
ಮುಗಿಸಿ ಬಂದೆವು..
ಎಲ್ಲಿ ಹೋದರೂ ತಲೆ ಇದ್ರೆ ಬದುಕಬಹುದು ಅಂತ ಸುಮ್ಮನೆ ಹೇಳ್ತಾರಾ.. !

ಅದಕ್ಕೆ ನಾವು ಭಾರತೀಯರು ಬುದ್ಧಿವಂತರು..
ಹೆಂಗೆ ಇಂಗ್ಲೀಷರನ್ನ ಮಂಗ maaಡಿದ್ದು ನಾವು..
ನಮ್ಮನ್ನ ಅಷ್ಟು ವರ್ಷ ಆಳಿ ದೋಚಿದ ಅವರಿಗೆ ಇಷ್ಟಾದ್ರೂ ಮೋಸ ಮಾಡದೇ ಇದ್ರೆ ದೇವರು ಮೆಚ್ಚುತ್ತಾನಾ?
😜


ಅನುಭವ

ಹಲವರಿಗೆ ಹಲವು ಸರಿ ಇಂತಹ ಅನುಭವ ಆಗಿರಬಹುದು..

ನೀವು ಎಲ್ಲಾದರೂ ಹೋಗೋಣ ಅಂತ ತೀರ್ಮಾನಿಸಿ ಜೊತೆ ಇರುವ ಕೆಲವು ಸ್ನೇಹಿತರಿಗೆ ಹೇಳಿದಾಗ,
ಹೊರಡೋಣ ಅಂತಾರೆ
ಆದರೆ
ಹೇಗೆ ಹೋಗೋಣ ಅಂತ ಕೇಳಿದ್ರೆ..

ಅದರಲ್ಲಿ ಕೆಲವರು..
"ಹೇಯ್...ಹೇಗಾದ್ರೂ ಆಯ್ತು, ನೀವು ಹೇಳಿದ ಹಾಗೆ,ನನಗೆ ಅಷ್ಟು ಐಡಿಯಾ ಇಲ್ಲಪ್ಪ"ಅಂತಾರೆ..
ಅದೇ...
ನಾವು ನಮಗೆ ಗೊತ್ತಿದ್ದ ದಾರಿಯಲ್ಲಿ ಅವರನ್ನ ಕರೆದು ಕೊಂಡು ಬಂದು ಸ್ವಲ್ಪ ಹೊತ್ತಿಗೆ....
ಒಂದು ಸಣ್ಣ ತಣ್ಣನೆಯ ಡೈಲಾಗ್ ತೇಲಿ ಬಿಡ್ತಾರೆ...

"ಅಯ್ಯೋ..ಇದು ಸಿಕ್ಕಾಪಟ್ಟೆ ದೂರ ಆಯ್ತಪ್ಪ,ಎಷ್ಟು ಸಿಗ್ನಲ್ ಸಿಕ್ಕುತ್ತೆ,ಟ್ರಾಫಿಕ್ ಬೇರೆ,ರೋಡ್ ಬೇರೆ ಸರಿ ಇರಲಿಲ್ಲ,ಏರಿಯಾ ಒಂತರಾ ಇತ್ತು..
ಆ ರೋಡ್ ನಿಂದ ಬರಬಹುದಿತ್ತಪ್ಪ..ಅಲ್ವಾ!?"
ಅಂತ...

ಆದರೆ ಮೊದಲೇ ಕೇಳಿದಾಗ,ಗೊತ್ತಿದ್ದರೂ ಅವರ ಅಭಿಪ್ರಾಯ ಹೇಳಿರೋದೇ ಇಲ್ಲ..!
ಇದೇ
ರೀತಿ ಸೇಫ್ ಗೇಮ್,
ಹೋಟೆಲ್ ಹೋದಾಗಲೂ ಮಾಡ್ತಾರೆ,

ಯಾವ ಹೋಟೆಲ್ಗೆ ಹೋಗೋಣ ಅಂದರೆ..
ನೀವೇ ಹೇಳಿದಲ್ಲಿ ಹೋಗೋಣ ನಮಗೇನು ತೊಂದರೆ ಇಲ್ಲಪ್ಪ,ಅದೇ ಬೇಕು ಇದೆ ಬೇಕು ಅಂತೆಲ್ಲಾ ಇಲ್ಲ ಅಂತಾರೆ..

ಅಲ್ಲಿ ಹೋಗಿ ಊಟ ತಿಂಡಿ ಎಲ್ಲಾ ಮುಗಿಸಿ ಹೊರಬಂದಮೇಲೆ,

ಥೋ ಚೂರು ಚನ್ನಾಗಿರಲಿಲ್ಲ,ಸಾಂಬಾರು ಉಪ್ಪು ಕಡಿಮೆ,ಪಲ್ಯ ಎರಡನೇ ಸರಿ ಹಾಕಲೇ ಇಲ್ಲ,ಅನ್ನ ಫುಲ್ ಗಟ್ಟಿ ಇತ್ತು,ಹಪ್ಪಳನಾ ಅದು..
ಚಪಾತಿ ಕೊಟ್ಟಿದ್ದ,ನಾಯಿ,ಚಕಳ ಎಳೆದು ತಿಂದ ಹಾಗೆ ಅನಿಸ್ತು..!
ಇನ್ನೊಂದು ಕಡೆ ಹೋಗಬಹುದಿತ್ತು ಅಲ್ವಾ!?"ಅಂತ ರಾಗ ತೆಗೆಯುತ್ತಾರೆ..!

ಬಟ್ಟೆ ಅಂಗಡಿ,ಇನ್ನಿತರೆ ಯಾವುದೇ ಶಾಪಿಂಗ್ ಮಾಡೋಕೆ ಜಾಗಕ್ಕೆ ಹೋಗೋಣ ಅಂದರು ಇದೇ ಪಾರ್ಮುಲಾ ಬಳಸುತ್ತಾರೆ ಕೆಲವರು..
ಅಲ್ಲಿ ಹೋಗುವವರೆಗೆ ಸುಮ್ಮನೆ ಇದ್ದು ಆಮೇಲೆ,
ಅಲ್ಲೇ ಚೀಪ್ ಸಿಗೋದು,ಇಲ್ಲಿ ಏನು ಚನ್ನಾಗಿಲ್ಲ ಅಲ್ವಾ
ಅಂತ ಒಗ್ಗರಣೆ ಶುರುವಾಗುತ್ತೆ..!

ನೀವು ಹೇಗೆ ಹೇಳ್ತೀರೋ ಹಾಗೆ ನನಗೆ ಅಷ್ಟು ಐಡಿಯಾ ಇಲ್ಲಪ್ಪ ಅಂತ ಹೇಳಿ..
ಕೊನೆಗೆ ತಮ್ಮ ಹಳೇ ರಾಗ ತೆಗೆಯೋರು ಎಲ್ಲಾ ಕಡೆ ಸಿಗ್ತಾರೆ ಅನಿಸುತ್ತೆ.

ಈ ರೀತಿ ಸೇಫ್ ಗೇಮ್ ಆಡುತ್ತಾ.
ತಾವು ಸೇಫ್ ಸೈಡ್ ಇದ್ದು,ಕೊನೆಗೆ ನೀವು ತಗೊಂಡ ತೀರ್ಮಾನ ಸರಿಯಿಲ್ಲ ನನಗೆ ಎಲ್ಲಾ ಗೊತ್ತಿತ್ತು ಅಂತ ಕ್ರೆಡಿಟ್ ತಗೊಳ್ಳೋಕೆ ಮತ್ತು ನಾವೇ ಸರಿ ಅಂತ ಎಲ್ಲರ ಹತ್ರ ಒಳ್ಳೆಯವರಾಗಿ ಹೈಲೈಟ್ ಆಗೋಕೆ ಪ್ರಯತ್ನ ಪಡೋರು, ಎಲ್ಲಾ ಕ್ಷೇತ್ರದಲ್ಲೂ ಇರ್ತಾರೆ..

ಮೈಮೇಲೆ ಹರಳೆಣ್ಣೆ ಹಾಗು ಗ್ರೀಸ್ ಹಚ್ಚಿಕೊಂಡ್ ಇರೋ ಜನ ಅನ್ನಬಹುದು ಅಂಥವರನ್ನು..
ಯಾವ ಸಮಸ್ಯೆ,ಜವಾಬ್ದಾರಿಗೂ ಸಿಕ್ಕಿಕೊಳ್ಳಲ್ಲ,ಜಾರಿಕೊಳ್ಳುತ್ತಾರೆ..

ಎಲ್ಲರ ಹತ್ರ ಒಳ್ಳೆಯರಾಗಿ ಇರಬೇಕು,ಒಳ್ಳೆಯವರು ಅಂತ ಹೇಳಿಸಿ ಕೊಳ್ಳಬೇಕು,ಹೊಗಳಿಕೆ ಬೇಕು..
ನಾವು ಮಾತ್ರ ಯಾವುದೇ ಜವಾಬ್ದಾರಿ ತಗೊಳ್ಳಲ್ಲ,ಎಲ್ಲದರಿಂದ ನುಣುಚಿ ಕೊಳ್ಳಬೇಕು..
ಆದರೆ ಯಾವುದೇ ತೀರ್ಮಾನ,ನೇತೃತ್ವ ತಗೊಂಡು ರಿಸ್ಕ್ ತಗೊಳ್ಳೋಕೆ ತಯಾರಿರಲ್ಲ..

ಬೇರೆಯವರು ತಪ್ಪಿಗೆ ಸಿಕ್ಕಿಕೊಳ್ಳೋದೇ ಕಾಯ್ತಾ ಇರ್ತಾರೆ, ಕೊಂಕು ಮಾತಾಡಿ ತಾವು ಸರಿ ಅಂತ ಹೇಳೋಕೆ ಎಲ್ಲಾ ಸಂಧರ್ಭದಲ್ಲಿ ಹೊಂಚು ಹಾಕುತ್ತಾ ತವಕಿಸ್ತಾ ಇರ್ತಾರೆ...!😢

ಅದೇ ಕೆಲವರ ಅತಿ ಬುದ್ಧಿವಂತಿಕೆ..

ಕೊನೆಯವರೆಗೂ ಹಾಗೆ ಇಮೇಜ್ ಮುಂದುವರೆಸಿಕೊಂಡು ಬರೋಕೆ ಪ್ರಯತ್ನ ಪಡ್ತಾರೆ ನಮ್ಮ ನಿಮ್ಮ ನಡುವೆ ಇರುವವರಲ್ಲೇ ಕೆಲವರು...

"ಹೇಗಾದ್ರೂ ಆಯ್ತು,ನೀವು ಹೇಳಿದ ಹಾಗೆ ನಮಗೆ ಏನೂ ತೊಂದರೆ ಇಲ್ಲಪ್ಪ"..
😂

ಲೈಫ್ ಸೈಕಲ್ಲು

ಕ್ವಾಸ..
ನಡೆದು ಕೊಂಡೆ ಎಲ್ಲಾ ಕಡೆ ಓಡಾಡೋದು ಕಷ್ಟ ಅಂತ ಸೈಕಲ್ ತಗೊಂಡ..
ಸೈಕಲ್ ಪೆಡಲ್ ತುಳಿದು ತುಳಿದು ಕಾಲು ನೋವಾಯ್ತು ಅಂತ ಬೈಕ್ ತಗೊಂಡ...
ಬೈಕ್ ಓಡಿಸಿ ಓಡಿಸಿ ಬೆನ್ನು ನೋವು ಬಂತು ಅಂತ
ಕಾರ್ ತಗೊಂಡ...
ಕಾರ್ ಓಡಿಸಿ ಓಡಿಸಿ ಹೊಟ್ಟೆ ಬಂತು,ವೈಟ್ ಜಾಸ್ತಿ ಆಯ್ತು ಅಂತ
ಮತ್ತೆ ಸೈಕಲ್ ತಗೊಂಡಾ...
ಬರೀ ಸೈಕಲ್ ಹೊಡೆದ್ರೆ ಹೊಟ್ಟೆ ಕರಗಲ್ಲ,ವೈಟ್ ಕಡಿಮೆ ಆಗಲ್ಲ ಅಂತ ವೇಗದ ನಡಿಗೆ(brisk walk) ಶುರು ಮಾಡಿದ್ದಾನಂತೆ
ದಿನಾ...!

ಲೈಪು-ಸೈಕಲ್ಲು
😂

ವಿದೇಶಿಯರ ಭಾರತ ಪ್ರೀತಿ

Stefani Joanne Angelina Germanotta,
#Lady_Gaga
ಎಂಬ ಅಮೇರಿಕಾದ ಜನಪ್ರಿಯ ಪಾಪ್ ಹಾಡುಗಾರ್ತಿ,ನಟಿ,ಗೀತೆ ರಚನೆಕಾರರು,
ಮೊನ್ನೆ ಟ್ವಿಟರ್ ನಲ್ಲಿ  

"ಲೋಕ ಸಮಸ್ತ ಸುಖಿನೋ ಭವಂತು"
(लोक समस्थ सुखिनो भवंत्यु)ಅಂತ ಟ್ವೀಟ್ ಮಾಡಿದ್ದಾರೆ....!

ಹಾಗೆ
ಇನ್ನೊಬ್ಬರು ಅಮೇರಿಕಾದವರಾದ
Katheryn Elizabeth Hudson.
#Katy_perry
ಇವರೂ ಕೂಡ ಖ್ಯಾತ ಪಾಪ್ ಹಾಡುಗಾರ್ತಿ ಹಾಗೂ ಗೀತರಚನೆ ಮಾಡುವವರು,ಟಿವಿ ಕಾರ್ಯಕ್ರಮದ ತೀರ್ಪುಗಾರರು..
ಇವರ Bone apetite,
ಇವರ ಬಲಬಾಗದ ರಟ್ಟೆ ಯಲ್ಲಿ (Right biseps)

"ಅನುಗಚ್ಛತು ಪ್ರವಾಹ0"(अनुगच्छतू प्रवाहमं)
ಅಂತ ಬಹಳ ಹಿಂದೆಯೇ ಸಂಸ್ಕೃತದಲ್ಲಿ ಹಚ್ಛೆ ಹಾಕಿಸಿಕೊಂಡಿದ್ದಾರೆ..

ಇದು ಎರಡು ಉದಾಹರಣೆಗಳು ಅಷ್ಟೇ...!

ನಮ್ಮ ಸಂಸ್ಕೃತಿ,ನಮ್ಮ ಧರ್ಮವನ್ನ ಯಾವುದೋ ದೇಶದ,ಯಾವುದೋ ಧರ್ಮದ ಈ ಜನಪ್ರಿಯ ಹಾಗೂ ಸಾಕಷ್ಟು ಹಣ ಇರುವ ಕೆಲವು ವ್ಯಕ್ತಿಗಳು ಯಾವುದೇ ದ್ವ0ದ್ವ,ರಾಜಕೀಯ,ಪೂರ್ವಾಗ್ರಹ ಇಲ್ಲದೇ,ನಮ್ಮ ದೇಶದ ಸಂಸ್ಕೃತಿ, ಪಾಲಿಸುತ್ತಾರೆ,ಗೌರವಿಸುತ್ತಾರೆ,ಅದರಲ್ಲಿ ಏನೋ ಕಂಡು ಕೊಳ್ಳುತ್ತಾರೆ..

ಆದರೆ
ನಮ್ಮ,ದೇಶ,ನಮ್ಮ ಧರ್ಮದಲ್ಲೇ ಇದ್ದುಕೊಂಡು,
ನಮ್ಮ ದೇಶ, ಧರ್ಮ,ಸಂಸ್ಕೃತಿ,ದೇವರು,ಧರ್ಮಗ್ರಂಥ,ಜನರನ್ನ,ಅಪಹಾಸ್ಯ ಮಾಡುವ ಕೆಲವರು,ನಿಜಕ್ಕೂ ಇವರು ನಮ್ಮ ಸಂಸ್ಕೃತಿ ಹಾಗೂ ಧರ್ಮದ ಮೇಲೆ ಇಟ್ಟಿರುವ,ಗೌರವ,ಪ್ರೀತಿ,ಅಭಿಮಾನವನ್ನ ನೋಡಿಯಾದರೂ ನಮ್ಮ ತನಕ್ಕೆ ಗೌರವ ಕೊಡೋದು ಕಲಿಯುವಂತಾಗಲಿ.......
ಅಲ್ವಾ!