ಒಂದು ದಿನ ನರಿ,ರಸ್ತೆಯಲ್ಲಿ ನಡೆದು ಹೋಗುವಾಗ
ಹೊಳೆಯ ಆಚೆಯ ಸೊಂಪಾಗಿ ಬೆಳೆದ ಕಬ್ಬಿನ ಗದ್ದೆ ಕಣ್ಣಿಗೆ ಬೀಳುತ್ತೆ..
ಆದರೆ ತುಂಬಿ ಹರಿಯುತ್ತಾ ಇರುವ ಹೊಳೆ ಕಬ್ಬಿನ ಗದ್ದೆಗೆ ಅಡ್ಡಲಾಗಿ ಇರುತ್ತೆ,ಹೊಳೆ ದಾಟಿ ಹೋಗೋಕೆ
ನರಿಗೆ ಕಷ್ಟ ಸಾಧ್ಯ ಅನಿಸುತ್ತೆ..!
ಅದಕ್ಕೆ
ಅದು ಹಾಗೆ ಏನು ಮಾಡೋದು ಅಂತ ಯೋಚನೆ ಮಾಡುತ್ತಾ ನಡೆದು ಹೋಗುವಾಗ,ಏನೂ ಅರಿಯದ ಒಂದು ಬಡಪಾಯಿ ಒಂಟೆ ಒಂದು ಅಲ್ಲೇ ಮುಂದೆ ಹೋಗುತ್ತಾ ಇರೋದನ್ನ ನೋಡುತ್ತೆ..
ಕೂಡಲೇ
ಒಂದು ಉಪಾಯ ಹೆಣೆಯುತ್ತೆ,ನರಿಯ ಬುದ್ದಿ ಗೊತ್ತಲ್ಲ!
ಒಂಟೆಯ ಸ್ನೇಹ ಹೇಗಾದರೂ ಸಂಪಾದಿಸಿ ಒಂಟೆ ಬೆನ್ನ ಮೇಲೆ ಕೂತು,ಸುರಕ್ಷಿತವಾಗಿ ಹೊಳೆ ದಾಟಿ ಕಬ್ಬಿನ ಗದ್ದೆಗೆ ಧಾಳಿ ಮಾಡಿ,ತನ್ನ ಹೊಟ್ಟೆ ತುಂಬಿಸಿ ಕೊಳ್ಳಲೇ ಬೇಕು,ಆಮೇಲೆ ಏನಾಗುತ್ತೆ ನೋಡೋಣ,ಮೊದಲು ನನ್ನ ಕೆಲಸ ಆಗಲಿ ಅಂತ ಒಂದು ಯೋಜನೆ ಕ್ಷನಾರ್ದದಲ್ಲೇ ಹಾಕುತ್ತೆ.....
ಕೂಡಲೇ ರಸ್ತೆಯಲ್ಲಿ ಓಡಿ ಹೋಗಿ,ಮುಂದೆ ಹೋಗುತ್ತಾ ಇರುವ ಒಂಟೆಯನ್ನ ಅಡ್ಡ ಹಾಕಿ ನಿಲ್ಲಿಸಿ,
"ನಮಸ್ಕಾರ ಒಂಟೆ ಅಣ್ಣ,ಯಾವ ಕಡೆ ಸವಾರಿ,ಅಯ್ಯೋ... ಎಷ್ಟು ಬಡವಾಗಿದ್ದಿ,ಎಷ್ಟು ದೂರದಿಂದ ನಡೆದು ಬಂದಿದ್ದಿಯೋ ಏನೋ!?ನಿನ್ನ ಕುಟುಂಬ ಎಲ್ಲಾ ಹೇಗಿದೆಯೋ ಏನೋ,ಹೀಗೆ ಆದರೆ ಇನ್ನೂ ಅಶಕ್ತನಾಗ್ತಿಯಾ,ನಿನ್ನ ಕುಟುಂಬ ಕೂಡ ಬೀದಿ ಪಾಲಾಗುತ್ತೆ,ಅದಕ್ಕೆ ನನ್ನ ಜೊತೆ ಬಾ ನಿನಗೆ ಹೊಟ್ಟೆ ತುಂಬಾ ಊಟ,ನಿನ್ನ ಬೆನ್ನು ತುಂಬಾ ನೀರು ತುಂಬಿಸುವ ವ್ಯವಸ್ಥೆ ಮಾಡ್ತೀನಿ,ನಿನ್ನ ಕುಟುಂಬಕ್ಕೂ ವ್ಯವಸ್ಥೆ ಮಾಡಬಹುದು,ಕಬ್ಬು ತಿನ್ನು ಎಷ್ಟು ಸಿಹಿ ಇರುತ್ತೆ ಗೊತ್ತಾ"! ಅಂತ,ಆಸೆ ತೋರಿಸಿ ಅದರ ಬ್ರೈನ್ ವಾಷ್ ಮಾಡಿ...
ತನ್ನ ಗುಹೆ ಹತ್ತಿರ ಕರೆದು ಕೊಂಡು ಹೋಗುತ್ತೆ..
ಅಲ್ಲಿ,ಇಲ್ಲಿ ಮೊದಲು ಕದ್ದು ತನ್ನ ಮನೆಯಲ್ಲಿ ಕೂಡಿಟ್ಟಿದ್ದ ಕಬ್ಬನ್ನ ಕೊಟ್ಟು ಒಂಟೆಗೆ ಚನ್ನಾಗಿ
ಕಬ್ಬು ತಿನ್ನುವ ಅಭ್ಯಾಸ ಮಾಡಿಸುತ್ತೆ..ನರಿ....!
ಒಂಟೆಗೂ ದಿನ ಕಳೆದಂತೆ ಕಬ್ಬಿನ ರುಚಿ ಹಿಡಿಯುತ್ತೆ,ಇದೇ ಆರಾಮ್ ಜೀವನ ಅಂತ ಅದೂ ಕೂಡ ನರಿಯ ಜೊತೆ ಕಬ್ಬು ತಿನ್ನೋದು ಅಭ್ಯಾಸ ಮಾಡಿಕೊಂಡು ಇದ್ದು ಬಿಡುತ್ತೆ..
ಒಂದು ದಿನ ಬೆಳಿಗ್ಗೆ ಹೊಂಚು ಹಾಕಿ ನರಿ ತನ್ನ ಯೋಜನೆಯ ಪ್ರಸ್ತಾಪ ಮಾಡುತ್ತೆ..
"ನೋಡು ಹೀಗೆ ಇಷ್ಟೇ ತಿನ್ನುತ್ತಾ ಇರೋಕೆ ಆಗಲ್ಲ, ನಾವು ಕೂಡಿಟ್ಟ ಕಬ್ಬು ಕಾಲಿಯಾಗುತ್ತಾ ಬಂತು ಹಾಗಾಗಿ,ಹೊಳೆ ಆಚೆ ಒಂದು ದೊಡ್ಡ ಗದ್ದೆಯಿದೆ ಅಲ್ಲಿ ಹೋಗೋಣ,ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಹೊಳೆ ದಾಟಿದರೆ ಕಬ್ಬಿನ ಗದ್ದೆ ದಾರಿ ನನಗೆ ಗೊತ್ತು,ಬಹಳ ದಿನಕ್ಕೆ ಆಗುವಷ್ಟು ಕಬ್ಬು ಸಿಗುತ್ತೆ,ಎಲ್ಲಾ ತೆಗೆದು ಕೊಂಡು ಬರಬಹುದು"
ಅಂತ ಮೆಲ್ಲನೆ ಬಣ್ಣ ಬಣ್ಣದ ಮಾತನಾಡಿ,ಬೆಣ್ಣೆ ಹಚ್ಚಿ,ಉಪಾಯದಿಂದ ಒಂಟೆಯನ್ನ ಹೊಳೆ ದಾಟಲು ಒಪ್ಪಿಸಿತು..!
ಒಂಟೆ ನರಿಯ ಬಣ್ಣದ ಮಾತಿಗೆ ಮರುಳಾಗಿ,ಖುಷಿಯಿಂದ ಈ ಯೋಜನ್ಗೆ ಒಪ್ಪಿಗೆ ನೀಡಿತು...
ಒಂಟೆ,ನರಿಯನ್ನ ಹೊತ್ತು ನಿರಾಯಾಸವಾಗಿ ಹೊಳೆ ದಾಟಿತು,ಅಲ್ಲಿಂದ ಕಬ್ಬಿನ ಗದ್ದೆಯ ವರೆಗೆ ನಡೆದು ಹೋಗಿ,ಯಥೇಚ್ಛವಾಗಿ ಇಬ್ಬರೂ ಕಬ್ಬು ತಿಂದು,ಗದ್ದೆಯನ್ನು ಒಂದಷ್ಟು ಹಾಳು ಮಾಡಿ,ಇನ್ನೊಂದಷ್ಟು ತಗೊಂಡು ಹೊರಡಬೇಕು,ಅನ್ನುವಷ್ಟರಲ್ಲಿ..
ಎಂದಿನ ತನ್ನ ಅಭ್ಯಾಸದಂತೆ ಹೊಟ್ಟೆ ತುಂಬಿದ ಮೇಲೆ
ನರಿ ಊಳಿಡೋಕೆ ಶುರು ಮಾಡುತ್ತೆ....
"ಏಯ್ ಏನು ಮಾಡ್ತಾ ಇದೀಯಾ, ರೈತರು ಬರ್ತಾರೆ ಅಷ್ಟೇ,ಹಾಗೆ ಊಳಿಡ ಬೇಡ ಅಂತ ಪರಿ ಪರಿಯಾಗಿ ಪದೇ ಪದೇ ಒಂಟೆ ಹೇಳಿದರೂ, ಊಳಿಡೋದು ನರಿ ಮುಂದುವರೆಸಿತ್ತು..!
ನರಿಯ ಊಳಿನ ಸದ್ದು ಕೇಳಿ ಪಕ್ಕದ ಹೊಲದಲ್ಲೇ ಕೆಲಸ ಮಾಡುತ್ತಾ ಇದ್ದ ರೈತರು ದೊಣ್ಣೆ,ಕತ್ತಿ ಎಲ್ಲಾ ಹಿಡಿದು ಕೂಗುತ್ತಾ ಓಡಿ ಬರುತ್ತಾ ನೋಡಿದರೆ,ದೂರದಿಂದಲೇ ಒಂಟೆಯ ತಲೆ ಕಾಣಿಸ್ತಾ ಇದೆ..!
ಹತ್ತಿರ
ಬಂದವರೇ ಒಂಟೆಗೆ ಯದ್ವಾ ತದ್ವಾ ಒಂದೇ ಸಮನೆ ಹೊಡೆಯೋಕೆ ಶುರು ಮಾಡ್ತಾರೆ..
ಆದರೆ
ನರಿ ಅಪಾಯದ ಮುನ್ಸೂಚನೆ ಕಂಡ ತಕ್ಷಣ,ಊಳಿಡೋದು ನಿಲ್ಲಿಸಿ,ಸದ್ದಿಲ್ಲದೇ ಒಂಟೆಯ ಕಾಲಿನ ಅಡಿಯಿಂದ ನುಗ್ಗಿ ಅಲ್ಲಿಂದ ಜೋರಾಗಿ ಓಡಿ ಹೋಗಿ ತನ್ನ ಜೀವ ಉಳಿಸಿ ಕೊಳ್ಳುತ್ತೇ..
ಒಂಟೆಯನ್ನ ರೈತರು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ಹಳ್ಳಿಗೆ ಎಳೆದು ಕೊಂಡು ಹೋಗಿ,ಹಳ್ಳಿಯಲ್ಲಿ ಜೀತಕ್ಕೆ ಇಟ್ಟು ಕೊಳ್ಳುತ್ತಾರೆ..!
ಒಂಟೆಯ ಐಷಾರಾಮಿ ಜೀವನದ ಕತೆ,ವ್ಯಥೆ ಆಗಿ ಬಿಡುತ್ತೆ..
ಅಷ್ಟೇ..
ಯಾರೋ ಹೇಳಿದ್ರು ಅಂತ ಹಿಂದೆ ಮುಂದೆ ಯೋಚಿಸದೇ ಯಾವುದೋ ವಸ್ತು,ಹಣ,ಆಸ್ತಿ,ಅಂತಸ್ತುಗಳ ಗಳಿಕೆಗೆ ಕಟ್ಟು ಬಿದ್ದು ಬೇಡದ ಕೆಲಸ ಮಾಡೋಕೆ,ಸಮಾಜ ಘಾತುಕರ,ಭ್ರಷ್ಟರು,ಅಸಭ್ಯರ,ಅವಿವೇಕಿಗಳ ಕೈ ಜೋಡಿಸಿ ಜೊತೆಗೂಡಿದರೆ,ಜೀವನ ದುರಂತ ಅಂತ್ಯ ಕಾಣೋದರಲ್ಲಿ ಅನುಮಾನ ಇಲ್ಲ..
ಅವರು ಹೇಗೋ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ತಾರೆ..
ಆದರೆ
ಇಂತಹ ಜಾಲದಲ್ಲಿ
ಸಿಕ್ಕಿ ಕೊಂಡು ಮರ್ಯಾದೆ(ಇದ್ದರೆ)ಕಳೆದು ಕೊಳ್ಳೋದು ಸಭ್ಯರು..
ಸ್ವಂತ ಬುದ್ದಿ ಮುಖ್ಯ ಅಲ್ವಾ!?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ