ಬುಧವಾರ, ಜೂನ್ 29, 2022

ಬಿಳಿ ಕುದುರೆ ಸಾವು



ಉತ್ತರ ಇಂಗ್ಲೆಂಡ್ ನ,ವೆಸ್ಟ್ ಯಾರ್ಕ್ ಶೈರ್ ಎಂಬಲ್ಲಿ ಒಂದು ಬೆಟ್ಟವಿದೆ ಬೀಕನ್ ಹಿಲ್ ಎಂದು ಕರೆಯಲಾಗುವ ಈ ಬೆಟ್ಟ ಹತ್ತೋದು,ಒಂತರಾ ಎತ್ತರದ ಮರ ಹತ್ತಿದ ಹಾಗೆ,ಬಹಳ ಕಡಿದಾದ ದಾರಿ,
ತಣ್ಣನೆ ಗಾಳಿಯಲ್ಲಿ ಬೆಟ್ಟ ಹತ್ತುವಾಗ ಎಂತಹಾ ಚಳಿಯಲ್ಲೂ ಬೆವರು ಬರದವರು ಇಲ್ಲವೇನೋ..!

ಹೈಕಿಂಗ್,ಮೌಂಟೈನ್ ಬೈಕ್,ವಾಕಿಂಗ್,ರನ್ನಿಂಗ್,ಹಾಗೂ ಪಿಕ್ನಿಕ್,ಗೆ ಜನರು ಇಲ್ಲಿಗೆ ಬೇರೆ ಬೇರೆ ಊರಿನಿಂದ ಬರೋದು ಬಹಳ ಸಾಮಾನ್ಯ..

ಈ ಬೆಟ್ಟ ಹತ್ತಿ ಸ್ವಲ್ಪ ದೂರ ಹೋದ ಮೇಲೆ ಕೆಲವು ಮನೆ ಹಾಗೂ ಕೃಷಿ ಭೂಮಿ,ಸಾಕು ಪ್ರಾಣಿಗಳಾದ,ಲಾಮ,ಅಲ್ಪಾಕ,ಉಣ್ಣೆ ಕುರಿ,ಕುದುರೆ,ಫೋನಿ(ಸಣ್ಣ ಕುದುರೆ)ರೈತರ ಜಾಗದಲ್ಲಿ ಬೇಲಿಯ ಒಳಗೆ ಮೇಯುತ್ತಾ ಇರೋದು ಹಾಗೂ ಬಹಳ ಅಪರೂಪಕ್ಕೆ ರೈತರು ಕಾಣಸಿಗೋದು ಇರುತ್ತೆ..

ಹೀಗೆ ಮೊದಲ ಸಲ ಹೋದಾಗ,ಒಂದು ದೊಡ್ಡ ಬಿಳಿಯ ಕುದುರೆ(Percheron breed) ಹಾಗೂ ಇನ್ನೆರಡು ಸಣ್ಣ ಕುದುರೆ ಪೋನಿ ಅಂದು ಹೇಳಲಾಗುವ ಕುದುರೆಯನ್ನ,ಒಬ್ಬರು ರೈತ ಮಹಿಳೆ,ಅವರ ಇಬ್ಬರು ಮಕ್ಕಳು ಸವಾರಿ ಮಾಡಿಕೊಂಡು ಬರುತ್ತಾ ಇದ್ದರು,
ದೂರದಿಂದಲೇ ಫೋಟೋ ತೆಗದು ಕೊಂಡೇ..

ಸಾಮಾನ್ಯವಾಗಿ ನಡೆದು ಹೋಗುತ್ತಾ ಇರುವವರಿಗೆ ಮೊದಲು ಜಾಗ ಕೊಡುವುದು ಇಲ್ಲಿ ಸಾಮಾನ್ಯ..ಬಹಳ ಹತ್ತಿರ ಬಂದಾಗ ನಮಗೆ ಜಾಗ ಕೊಡಲು ನಿಂತಾಗ ನನ್ನ ನೋಡಿ ಹೇಗಿದಿರಿ ಅಂದರು ರೈತ ಮಹಿಳೆ,ಚನ್ನಾಗಿದ್ದೇವೆ ಎಂದು ಮಾತಿಗಿಳಿದು,
ಕುದುರೆಯನ್ನ ಮುಟ್ಟ ಬಹುದಾ ಎಂದೇ..

ಓಹ್..ಧಾರಾಳವಾಗಿ ಅಂದ್ರು..
ತಮ್ಮ ಮಕ್ಕಳನ್ನ ಕುದುರೆ ಸವಾರಿಗೆ ಆಗಾಗ ಅಭ್ಯಾಸ ಆಗಲಿ ಅಂತ ಕರೆದು ಕೊಂಡು ಬರ್ತೇನೆ..

ಇದು ನನ್ನ ಇಷ್ಟದ ಕುದುರೆ ಅಂತ ತಾನು ಸವಾರಿ ಮಾಡುತ್ತಾ ಇದ್ದ ಕುದುರೆಗೆ ಹೇಳಿದ್ರೂ..

ಕುದುರೆಗಳನ್ನ ಬಹಳ ಹಚ್ಚಿ ಕೊಂಡಂತೆ ಕಂಡರು,ಹೆಚ್ಚಿನವರು ನಾಯಿ,ಕುದುರೆ,ಬೆಕ್ಕು,ಇನ್ನಿತರ ಪ್ರಾಣಿಗಳನ್ನ ಮಕ್ಕಳಂತೆ ಕಾಣುತ್ತಾರೆ ಇಲ್ಲಿ..

ಹೀಗೆ ಕೆಲವು ವಿಷಯ ಮಾತಾಡಿ,ಕೊನೆಗೆ ಹೊರಟರು..
ಅವರ ಚಿಕ್ಕ ಮಗಳು,ಮಗ ಕೂಡ ಸ್ಮೈಲ್,ಬಾಯ್,ಟೇಕ್ ಕೇರ್,ಸೀ ಯು ಲೇಟರ್ ಹೇಳಿ ಹೊರಟರು..

ನಂತರ ಕೆಲವು ಬಾರಿ ಆ ಜಾಗಕ್ಕೆ ಭೇಟಿ ಕೊಟ್ಟಾಗ ಅದೇ ಬಿಳಿ ಕುದುರೆ ಅವರದ್ದೇ ಜಾಗದಲ್ಲಿ ಮೇಯುತ್ತಾ ಇದ್ದಾಗ,ಹೊರಗೆ ನಿಂತು, "ಏಯ್ ಬಿಳಿಯ ಬಾರೋ ಇಲ್ಲಿ" ಅಂದರೆ ಏನೋ ನನಗೆ ಕನ್ನಡದಲ್ಲಿ ಕರೆದಿದ್ದು ಅರ್ಥವಾಯ್ತು ಅನ್ನುವ ಹಾಗೆ ಓಡಿ ಬಂದು ಹತ್ರ ನಿಲ್ಲುತ್ತಾ ಇದ್ದ ಬಿಳಿಯ,ನಮ್ಮ ಭೇಟಿಗೆ ಬಂದ ಆಪ್ತರನ್ನ ಈ ಜಾಗಕ್ಕೆ ಕರೆದು ಕೊಂಡು ಹೋದಾಗ ಹಲವರು,ಈ ಬಿಳಿಯ ಹಾಗೂ ಸಣ್ಣ ಕುದುರೆಗಳನ್ನ ಹತ್ತಿರದಿಂದ ನೋಡಿ ಫೋಟೋ ತೆಗೆದು ಖುಷಿ ಪಟ್ಟಿದ್ದರು..!

ಆದರೆ ಚಳಿಗಾಲದಲ್ಲಿ ಹಲವು ಸಮಯ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ..!

ತೀರಾ ಇತ್ತೀಚೆಗೆ ಒಬ್ಬನೇ ಹೋಗಿದ್ದೆ ಅದೇ ಜಾಗಕ್ಕೆ..
ಎಲ್ಲಿ ಹುಡುಕಿದರೂ ಬೇಲಿಯ ಪಕ್ಕ ಮೇಯುತ್ತಾ ಇದ್ದ ನಮ್ಮ ಬಿಳಿಯ ಕಾಣಿಸಲೇ ಇಲ್ಲ..

ಬೇಲಿಯ ಪಕ್ಕ ಬಿಳಿಯದಾದ 2 ಒಂದರ ಕೆಳಗೆ ಒಂದು ವೈರ್ ಕಟ್ಟಲಾಗಿತ್ತು,
ಬೇಲಿಯ ಎದುರು ಹಲವು ಕಡೆ "ಡೋಂಟ್ ಫೀಡ್ ದ ಹಾರ್ಸ್ ದೇ ಆರ್ ಇನ್ ಸ್ಪೆಶಲ್ ಡಯಟ್"ಅಂತ ಪಲಕ ಹಾಕಲಾಗಿತ್ತು..

ಏನೋ ಅನುಮಾನ ಬಂತು..
ಅಲ್ಲಿ ಇಲ್ಲಿ ನೋಡಿದೆ ಯಾವುದೋ ಒಮ್ಮೆಯೂ ನೋಡದ ಎರಡು ಸಣ್ಣ ಹಾಗೂ ಒಂದು ದೊಡ್ಡ ಕುದುರೆ ಮೇಯುತ್ತಾ ಇದ್ದವು..!

ಯಾಕೋ ಅನುಮಾನ ಹಾಗೂ ತಳಮಳವಾಯ್ತು,ಏನೋ ಅವಘಡ ಆಗಿದೆ ಅಂತ ಅನಿಸ್ತು..

ವಾಪಾಸ್ ಬಂದೆ...

ಮತ್ತೆ ಅದಾದ ನಂತರ ಹಲವು ಸಲ ಭೇಟಿ ಕೊಟ್ಟಾಗಲೂ ಬಿಳಿಯನ ಪತ್ತೆ ಇಲ್ಲ..

ಕೇಳೋಣ ಎಂದರೆ ಹಲವು ಭಾರಿ ಭೇಟಿ ಕೊಟ್ಟಾಗಲೂ ಅದರ ಮಾಲೀಕರು ಜಮೀನಿನ ಸುತ್ತಮುತ್ತ ಎಲ್ಲೂ ಕಾಣಿಸಲಿಲ್ಲ!!?

ನಂತರ ಒಮ್ಮೆ ಪಕ್ಕದ ಜಮೀನಿನ ರೈತರು ಸಿಕ್ಕಾಗ,ಅವರ ಬಳಿ ಬಿಳಿ ಕುದುರೆ ಬಗ್ಗೆ ಕೇಳಿದಾಗ ಅವರು ಹೇಳಿದ್ದು,
ಬೆಟ್ಟಕ್ಕೆ ಅಂತ ಕುಟುಂಬದ ಜೊತೆ ಪಿಕ್ನಿಕ್ ಬರುವ ಕೆಲವರು
ತಾವು ತಿಂದು ಉಳಿದ ಆಹಾರವನ್ನ ಹೀಗೆ ಬೇಲಿಯ ಬಳಿ ಬಂದು ಸಾಕು ಪ್ರಾಣಿಗೆ ಕೊಡ್ತಾರೆ,ಅದನ್ನ ತಿಂದು ಫುಡ್ ಪಾಯ್ಸನ್ ಆಗಿ ಕುದುರೆ ಆರೋಗ್ಯ ಹಾಳಾಗಿತ್ತು ನಂತರ ಅದು ತೀರಿ ಹೋಯ್ತು ಎಂದು ಹೇಳಿದ್ರೂ..!

ಬಹಳ ನೋವು,ಬೇಸರವಾಯ್ತು,
ಅಷ್ಟು ಪ್ರೀತಿಯಿಂದ ಸಾಕಿದ್ದ ಅಷ್ಟು ದೈತ್ಯ ದೇಹಿ ಪ್ರಾಣಿಯನ್ನ ಹೀಗೆ ಯಾರೋ ಮಾಡಿದ ತಪ್ಪಿಗೆ ಕಳೆದು ಕೊಂಡಾಗ ಅದರ ಮಾಲೀಕರಿಗೆ ಎಷ್ಟು ನೋವಾಗ ಬಹುದು ಅಲ್ವಾ!!?

ಯಾರದ್ದೋ,ಪ್ರಾಣಿ,ಪಕ್ಷಿಗಳಿಗೆ,ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ,ಪಾರ್ಕ್ ನಲ್ಲಿರುವ ಪಕ್ಷಿಗಳಿಗೆ,ಪ್ರವಾಸಕ್ಕೆ ಹೋದಾಗ ಕಾಡಿನ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ನಾವು ತಿಂದು ಉಳಿದ,ಬ್ರೆಡ್,ರೈಸಬಾತ್,ದೋಸೆ,ಚಪಾತಿ,ಬಿಸ್ಕೆಟ್,ಹಾಳಾದ ಹಣ್ಣು ಪ್ಲಾಸ್ಟಿಕ್ ಸಹಿತ ಎಸೆಯೋದು,ತಿನ್ನಿಸೋದು,ಅವಕ್ಕೆ ಒಗ್ಗದ ಆಹಾರ ಕೊಟ್ಟು ಅವುಗಳ ಆರೋಗ್ಯ ಹಾಳು ಮಾಡಿ ಅವುಗಳ ಸಾವಿಗೆ ಕಾರಣವಾಗೋದು ಸರಿ ಅಲ್ಲ ಅಲ್ವಾ!?

ಅವುಗಳ ಆಹಾರ ಪದ್ಧತಿಯೇ ಬೇರೆ ಇರುತ್ತೆ ಅನ್ನೋದು ಗಮನದಲ್ಲಿ ಇಟ್ಟು ಕೊಳ್ಳೋದು ಅವುಗಳಿಗೆ ನಾವು ಮಾಡುವ ಸಹಾಯ..
ಅವು ಅಳಿದು ಉಳಿದ ಹಾಳಾದ ಆಹಾರ ಹೊಟ್ಟೆಗೆ ತುಂಬಿ ಕೊಳ್ಳುವ ಡಸ್ಟ್ ಬಿನ್ ಗಳು ಅಲ್ಲ..

ನಮ್ಮ ನಿಮ್ಮ ಹಾಗೆ ಜೀವ ಇರುವ ಪ್ರಾಣಿಗಳು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ